ಬೆಂಗಳೂರು : ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಕೋವಿಡ್ ನಿಂದ ದುಡ್ಡು ಮಾಡುವ ದರಿದ್ರ ಪರಿಸ್ಥಿತಿ ಸರ್ಕಾರಕ್ಕೆ ಬಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೊರೊನಾ ವೈರಸ್ ನಿಯಂತ್ರಣ ಮಾಡಲು ಬಹಳ ಶ್ರಮ ಪಡುತ್ತಿದೆ. ಅದರಂತೆ ನಮಗೂ ಒಂದು ಆಸ್ಪತ್ರೆ ಹೊಣೆ ಕೊಡಿ ನಿಭಾಯಿಸುತ್ತೇವೆಂದು ಸಿದ್ದರಾಮಯ್ಯ ಹೇಳಲಿ ಎಂದು ಸವಾಲಾಕಿದ ವಿಶ್ವನಾಥ್, ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ವೈದ್ಯಕೀಯ ಉಪಕರಣಗಳಿಗೆ ಆರಂಭದಲ್ಲಿ ಹೆಚ್ಚಿನ ಬೆಲೆ ಇತ್ತು. ಈಗ ಆ ಉಪಕರಣಗಳ ಬೆಲೆ ಇಳಿದಿದೆ. ಮೊದಲಿನ ದರಗಳಿಗೆ ಹೋಲಿಸಿ ಸಿದ್ದರಾಮಯ್ಯ ಅವರು ಆರೋಪ ಮಾಡುವುದು ಸರಿಯಲ್ಲ. ಅವರ ಬಳಿ ದಾಖಲೆಗಳಿದ್ದರೆ ಸಲ್ಲಿಸಲಿ ದಾಖಲೆ ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಇದೇ ವೇಳೆ ಲಾಕ್ ಡೌನ್ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡುವುದಿಲ್ಲ. ಲಾಕ್ ಡೌನ್ ಮಾಡುವ ಚಿಂತನೆಯೂ ಸರ್ಕಾರದ ಮುಂದಿಲ್ಲ. ಲಾಕ್ ಡೌನ್ ಮಾಡಿದರೂ ಕೊರೊನಾ ಹೋಗುವುದಿಲ್ಲ, ಮತ್ತೆ ಹೆಚ್ಚಾಗುತ್ತದೆ. ಕೆಲವು ಕಡೆ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡಿಕೊಳ್ಳುತ್ತಿದ್ದಾರೆ. ಸ್ವಯಂಪ್ರೇರಿತ ಲಾಕ್ ಡೌನ್ ಗೆ ಸರ್ಕಾರದ ವಿರೋಧ ಇಲ್ಲ ಎಂದರು.








