ಪ್ಯಾರಿಸ್ ಒಲಿಂಪಿಕ್ಸ್ ನ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆಯಲ್ಲಿ ಭಾರತ ಮತ್ತೊಂದು ಕಂಚಿನ ಪದಕ ಗೆದ್ದಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಈ ಸ್ಪರ್ಧೆಯಲ್ಲಿ ರಿಪಬ್ಲಿಕ್ ಆಫ್ ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ಅವರನ್ನು 16-10 ಅಂತರದಿಂದ ಸೋಲಿಸಿ ಮನುಭಾಕರ್ – ಸರಬ್ಜೋತ್ ಸಿಂಗ್ ಜೋಡಿ ಭಾರತಕ್ಕೆ 2ನೇ ಪದಕ ತಂದುಕೊಟ್ಟಿದ್ದಾರೆ.
ಸೋಮವಾರ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತೀಯ ಜೋಡಿ 580 ಅಂಕಗಳನ್ನು ಕಲೆ ಹಾಕಿದ್ದರು.
ರಿಪಬ್ಲಿಕ್ ಆಫ್ ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ 579 ಅಂಕಗಳಿಸಿ ನಾಲ್ಕನೇ ಸ್ಥಾನ ಪಡೆದಿದ್ದರು. 3ನೇ ಮತ್ತು 4ನೇ ಸ್ಥಾನಗಳನ್ನು ಪಡೆದ ಸ್ಪರ್ಧಿಗಳ ನಡುವೆ ಕೇವಲ 1 ಅಂಕಗಳ ವ್ಯತ್ಯಾಸವಿದ್ದಿದ್ದರಿಂದ ಕಂಚಿನ ಪದಕದ ಸ್ಪರ್ಧೆಯಲ್ಲಿ ಭಾರೀ ಪೈಪೋಟಿ ನಿರೀಕ್ಷಿಸಲಾಗಿತ್ತು. ಈಗ ಕಂಚಿನ ಪದಕದ ಸ್ಪರ್ಧೆಯಲ್ಲಿ ಕೊರಿಯನ್ ಜೋಡಿಯನ್ನು ಸೋಲಿಸಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಕಂಚಿಗೆ ಮುತ್ತಿಕ್ಕಿದೆ.
ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮನು ಭಾಕರ್ಗೆ ಇದು ಎರಡನೇ ಪದಕ. ಇದಕ್ಕೂ ಮುನ್ನ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಅಲಂಕರಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದರು. ಸದ್ಯ ಸರಬ್ಜೋತ್ ಸಿಂಗ್ ಜೊತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಮನು ಭಾಕರ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತಕ್ಕೆ 2ನೇ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಮನು ಭಾಕರ್ 25 ಮೀಟರ್ ಏರ್ ಪಿಸ್ತೂಲ್ ಮಹಿಳಾ ಸ್ಫರ್ಧೆಯಲ್ಲೂ ಭಾಗವಹಿಸುತ್ತಿದ್ದು, ಹೀಗಾಗಿ ಭಾರತೀಯ ನಾರಿಯಿಂದ ಮೂರನೇ ಪದಕದ ನಿರೀಕ್ಷೆಯನ್ನು ಕೂಡ ಭಾರತ ಇಟ್ಟುಕೊಂಡಿದೆ.