ಹಾಸನ: ನಕಲಿ ಆಧಾರ್ ಕಾರ್ಡ್ ತೋರಿಸಿ ಬಾಂಗ್ಲಾ ಅಕ್ರಮ ವಲಸಿಗರು ಹಾಸನದಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಅಸ್ಸಾಂ ಮೂಲದವರೆಂದು ಸುಳ್ಳು ಹೇಳಿ ಕೆಲಸ ಗಿಟ್ಟಿಸಿಕೊಳ್ಳುತ್ತಿರುವ ಆರೋಪ ಹಾಸನ (Hassan) ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ಕೇಳಿ ಬರುತ್ತಿದೆ.
ಕೂಲಿ ಕೆಲಸಗಾರರ ಸೋಗಿನಲ್ಲಿ ಬಾಂಗ್ಲಾದ ಅಕ್ರಮ ವಲಸಿಗರು ಅಸ್ಸಾಂ (Assam) ನಕಲಿ ಆಧಾರ್ ಕಾರ್ಡ್ (Adhaar Card) ಬಳಸಿ ಕೆಲಸದ ನೆಪವೊಡ್ಡಿ ಕೆಲಸಕ್ಕೆ ಬರುತ್ತಿದ್ದಾರೆ. ಇದಕ್ಕೆ ಕೆಲವ ಏಜೆಂಟ್ ರು ಸಾಥ್ ನೀಡುತ್ತಿದ್ದಾರೆ ಎನ್ನಲಾಗಿದೆ. ತಾವೇ ನಕಲಿ ದಾಖಲೆ ಸೃಷ್ಟಿಸಿ, ವಲಸಿಗರಿಗೆ ಕೆಲಸ ಕೊಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ನೂರಾರು ಸಂಖ್ಯೆಯಲ್ಲಿ ಅಪರಿಚಿತರು ರಾತ್ರೋರಾತ್ರಿ ಬಸ್ಸಿನಲ್ಲಿ ಬಂದಿಳಿದು, ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಕೆಲಸ ಹುಡುಕುತ್ತಿದ್ದರು. ಕೆಲ ಮಾಲೀಕರು ಯಾವುದೇ ದಾಖಲೆ ಪರಿಶೀಲನೆ ನಡೆಸದೆ ಕಾರ್ಮಿಕರೆಂಬ ಅನಿವಾರ್ಯತೆಯಿಂದಾಗಿ ಕೆಲಸ ನೀಡುತ್ತಿದ್ದರು. ವಲಸಿಗರು ಸಿಕ್ಕ ಸಿಕ್ಕ ಜಾಗದಲ್ಲಿ ಗುಡಿಸಲು ಹಾಕಿಕೊಂಡು ನೆಲೆಸುತ್ತಿರುವುದನ್ನು ಕಂಡು ಜನರಲ್ಲಿ ಅನುಮಾನ ಹೆಚ್ಚಾಗಿದೆ. ಹೀಗಾಗಿ ಈ ಕುರಿತು ನಿಗಾ ವಹಿಸುವಂತೆ ಜನರು ಮನವಿ ಮಾಡಿದ್ದಾರೆ.
ಈ ಆರೋಪದ ಬೆನ್ನಲ್ಲೇ ಆಧಾರ್ ವಿಭಾಗದ ಅಧಿಕಾರಿಗಳು ಬೃಹತ್ ಜಾಲವನ್ನು ಪತ್ತೆ ಹಚ್ಚಿದ್ದಾರೆ. 5 ರಿಂದ 10 ಸಾವಿರ ರೂ. ಹಣ ಪಡೆದು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡುತ್ತಿರುವ ಕುರಿತು ಮಾಹಿತಿಯು ಹೊರಬಿದ್ದಿದೆ.
ಬೆಂಗಳೂರು (Bengaluru) ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಒಂದೇ ದಾಖಲೆ ಬಳಸಿ ದಿನಾಂಕ, ಹೆಸರು ಬಳಸಿ ಹತ್ತಾರು ಆಧಾರ್ ವಿತರಣೆ ಮಾಡಿರುವುದು ಬಯಲಿಗೆ ಬಂದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಅನುಶ್ರೀಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.








