ಸೇನಾ ಆಸ್ಪತ್ರೆಯ ಬಗ್ಗೆ ಕೇಳಿಬಂದಿರುವ ಟೀಕೆ ದುರುದ್ದೇಶಪೂರಿತ ಮತ್ತು ಆಧಾರರಹಿತ – ಭಾರತೀಯ ಸೇನೆ
ಹೊಸದಿಲ್ಲಿ, ಜುಲೈ 5: ಕಳೆದ ತಿಂಗಳು ಗಾಲ್ವಾನ್ ವ್ಯಾಲಿ ಘರ್ಷಣೆಯಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಬೆನ್ನಲ್ಲೇ ಲೇಹ್ ಆಸ್ಪತ್ರೆಯ ವೈದ್ಯಕೀಯ ವ್ಯವಸ್ಥೆಗಳ ಕುರಿತು ಕೇಳಿಬಂದಿರುವ ಟೀಕೆಯು ದುರುದ್ದೇಶಪೂರಿತ ಹಾಗೂ ಆಧಾರರಹಿತ ಎಂದು ಭಾರತೀಯ ಸೇನೆ ಶನಿವಾರ ಹೇಳಿದೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೇಹ್ ನ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯ ಸೌಲಭ್ಯದ ಸ್ಥಿತಿಗತಿ ಕುರಿತು ಕೆಲವರು ದುರುದ್ದೇಶಪೂರಿತ ಮತ್ತು ಆಧಾರರಹಿತ ಆರೋಪಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ. ನಮ್ಮ ಕೆಚ್ಚೆದೆಯ ಸಶಸ್ತ್ರ ಪಡೆಗಳಿರುವ ಕೊಠಡಿಯು ಆಸ್ಪತ್ರೆಯಂತೆ ಕಾಣುತ್ತಿಲ್ಲ. ಅಲ್ಲಿ ಮೆಡಿಸಿನ್ ಕ್ಯಾಬಿನೆಟ್ ಇತರೆ ಯಾವುದೇ ವೈದ್ಯಕೀಯ ಉಪಕರಣಗಳೇ ಇಲ್ಲ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಪಟ್ಟಿರುವುದು ದುರದೃಷ್ಟಕರ. ನಾವು ನಮ್ಮ ಸಶಸ್ತ್ರ ಪಡೆ ಸಿಬ್ಬಂದಿಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ನೀಡುತ್ತಿದ್ದೇವೆ. ಯೋಧರಿದ್ದ ಕೊಠಡಿಯು ಸೈನಿಕರ ಸಭಾಂಗಣದ ಒಂದು ಭಾಗವಾಗಿದ್ದು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಯ ಕೆಲ ವಾರ್ಡ್‌ಗಳನ್ನು ಐಸೋಲೇಷನ್ ಕೇಂದ್ರವಾಗಿ ಮಾರ್ಪಡಿಸಿದ್ದೇವೆ. ಯೋಧರಿಗೆ ಚಿಕಿತ್ಸೆ ನೀಡಲು ಆಡಿಯೋ ವಿಡಿಯೋ ತರಬೇತಿಗೆ ಬಳಸಲಾಗುತ್ತಿದ್ದ ಹಾಲ್ ಅನ್ನು ಆಸ್ಪತ್ರೆ ವಾರ್ಡ್ ಆಗಿ ಬದಲಿಸಿದ್ದೇವೆ ಇಲ್ಲೇ ಗಾಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡ ಯೋಧರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

100 ಹಾಸಿಗೆಗಳಷ್ಟು ವಿಸ್ತರಣೆಯ ಸಾಮರ್ಥ್ಯದ ಸ್ಥಳಾವಕಾಶ ಇಲ್ಲಿದ್ದು, ಇದು ಜನರಲ್ ಆಸ್ಪತ್ರೆ ಸಂಕೀರ್ಣದ ಭಾಗವಾಗಿದೆ” ಎಂದು ಎಂದು ಭಾರತೀಯ ಸೇನೆಯು ಸ್ಪಷ್ಟನೆ ನೀಡಿದೆ. ಮೋದಿಯವರು ಗಾಯಗೊಂಡ ಸೈನಿಕರನ್ನು ಭೇಟಿಯಾದ ಮಿಲಿಟರಿ ಆಸ್ಪತ್ರೆಯ ಸೌಲಭ್ಯವು ಆಸ್ಪತ್ರೆಯಂತೆ ಕಾಣುತ್ತಿಲ್ಲ ಎಂದು ಕೆಲವು ರಾಜಕೀಯ ಮುಖಂಡರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಜನರು ಟೀಕಿಸಿದ್ದರು.
ವೈದ್ಯರ ಸ್ಥಾನದಲ್ಲಿ ಛಾಯಾಗ್ರಾಹಕರು ಇದ್ದಾರೆ ಮತ್ತು ಯಾವುದೇ ವೈದ್ಯಕೀಯ ಉಪಕರಣಗಳು, ಔಷಧಿಗಳು ಅಥವಾ ಡ್ರೀಪ್ಸ್ ಗಳು ಕಾಣುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ದತ್ ಶುಕ್ರವಾರ ಟ್ವೀಟ್ ಮಾಡಿದ್ದರು. ಗಾಯಗೊಂಡ ಸೈನಿಕರೊಂದಿಗೆ ಪ್ರಧಾನಿಯವರ ಫೋಟೋ ಕುರಿತು ದತ್ ಅವರ ಪಕ್ಷದ ಸಹೋದ್ಯೋಗಿ ಸಲ್ಮಾನ್ ನಿಜಾಮಿ ಮೋದಿಯವರು ಸುಳ್ಳು ಹೇಳಲು ಜನಿಸಿದ್ದಾರೆ ಎಂದು ಟ್ವೀಟ್ ನಲ್ಲಿ ಹೇಳಿದ್ದರು. ಅಷ್ಟೇ ಅಲ್ಲ ಕೆಲವು ನೆಟ್ಟಿಗರು ಕೂಡ ಮಿಲಿಟರಿ ಆಸ್ಪತ್ರೆಯ ಸೌಲಭ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿ ಟೀಕಿಸಿದ್ದರು.








