ಬೈರೂತ್: ಇಸ್ರೇಲ್-ಹಮಾಸ್-ಹಿಜ್ಬುಲ್ಲಾ (Israel Hezbollah War) ಮಧ್ಯೆ ನಡೆಯುತ್ತಿರುವ ಯುದ್ಧ ತೀವ್ರತೆ ಪಡೆಯುತ್ತಿದೆ. ಈ ಮಧ್ಯೆ ಪ್ರತೀಕಾರದ ದಾಳಿಗಳು ತೀವ್ರಗೊಳ್ಳುತ್ತಿವೆ. ಬೈರೂತ್ ನಗರದ ಮೇಲೆ ಇಸ್ರೇಲ್ ನ ಪಡೆಗಳು ವೈಮಾನಿಕ ದಾಳಿ ಮುಂದುವರಿಸಿವೆ. ಇರಾನ್ ಸುಪ್ರೀಂ ಲೀಡರ್ ಇಸ್ರೇಲ್ ವಿರುದ್ಧ ಗುಡುಗಿದ ನಂತರ ಇಸ್ರೇಲ್ ತನ್ನ ವಾಯುದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಸೋಮವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಲಾಜಿಸ್ಟಿಕ್ ಘಟಕದ ಮುಖ್ಯಸ್ಥ ಸುಹೇಲ್ ಹುಸೇನ್ ಹುಸೇನಿ ಹತ್ಯೆ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ ಹೇಳಿದೆ. ಅ. 7ರಂದು ಯುದ್ಧದ ವರ್ಷಾಚರಣೆ ವೇಳೆ ಬೈರೂತ್ ನಲ್ಲಿ ನಡೆಸಿದ ದಾಳಿಯಲ್ಲಿ ಹುಸೇನಿಯನ್ನು ಹತ್ಯೆಗೈಯಲಾಗಿದೆ ಎಂದು ಇಸ್ರೇಲ್ ಹೇಳಿದೆ. ಆದರೆ, ಹಿಜ್ಬುಲ್ಲಾ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸೋಮವಾರದಂದು ಇಸ್ರೇಲ್ ಒಂದು ಗಂಟೆಯಲ್ಲಿ 120ಕ್ಕೂ ಅಧಿಕ ಹಿಜ್ಬುಲ್ಲಾ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ದಕ್ಷಿಣ ಲೆಬನಾನ್‌ನಲ್ಲಿ ಒಂದು ಗಂಟೆಯೊಳಗೆ 120ಕ್ಕೂ ಹೆಚ್ಚು ಭಯೋತ್ಪಾದಕರ ಅಡಗುದಾಣಗಳನ್ನು ಧ್ವಂಸ ಮಾಡಿತ್ತು ಎನ್ನಲಾಗಿದೆ. ಗಾಜಾದಲ್ಲಿನ (Gaza) ಮಸೀದಿಯ (Mosque) ಮೇಲೆ ಇಸ್ರೇಲ್ (Israel) ವಾಯುಪಡೆ ನಡೆಸಿದ್ದ ವೈಮಾನಿಕ ದಾಳಿಯಲ್ಲಿ 26 ಜನ ಸಾವನ್ನಪ್ಪಿದ್ದಾರೆ. ಹಮಾಸ್ ಕೂಡ ಕೌಂಟರ್ ಅಟ್ಯಾಕ್ ಮಾಡಿತ್ತು. ಇಸ್ರೇಲ್ ವೈಮಾನಿಕ ದಾಳಿ ಬೆನ್ನಲ್ಲೇ ಗಾಜಾದಿಂದ ರಾಕೆಟ್‌ಗಳನ್ನು (Rocket Fired) ಹಾರಿಸಲಾಗಿತ್ತು.








