ಬೆಂಗಳೂರು: ಲಿಫ್ಟ್ (Lift) ಕಾಮಗಾರಿಗಾಗಿ ತೋಡಿದ್ದ ಗುಂಡಿಗೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಈ ಘಟನೆ ಕಾಡುಗೋಡಿ (Kadugodi) ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲದಲ್ಲಿ ನಡೆದಿದೆ. ಸುಹಾಸ್ ಗೌಡ (5) ಸಾವನ್ನಪ್ಪಿರುವ ಬಾಲಕ. ಅಕ್ಟೋಬರ್ 23ರಂದು ಬೆಳಗ್ಗೆ ಈ ಘಟನೆ ನಡೆದಿದೆ. ಕನ್ನಮಂಗಲದ ಮಿಲ್ಕ್ ಡೈರಿ (Milk Dairy) ಕಟ್ಟಡ ಕಾಮಗಾರಿ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡದಲ್ಲಿ ಲಿಫ್ಟ್ಗೆಂದು 5 ಅಡಿ ಗುಂಡಿ ತೋಡಲಾಗಿತ್ತು. ಭಾರೀ ಮಳೆಯ ಪರಿಣಾಮ ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದರೂ ಸಿಬ್ಬಂದಿ ಯಾವುದೇ ಮುನ್ನೆಚ್ಚರಿಕೆ ವಹಿಸಿರಲಿಲ್ಲ. ಪರಿಣಾಮವಾಗಿ ಬಾಲಕ ಬಲಿಯಾಗುವಂತಾಗಿದೆ.
ಬಾಲಕನು ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಆಯತಪ್ಪಿ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಪ್ರಕರಣದ ಕುರಿತು ಮಿಲ್ಕ್ ಡೈರಿ ಅಧ್ಯಕ್ಷನ ಮೇಲೆ ಎಫ್ಐಆರ್ ದಾಖಲಾಗಿದೆ. ಈ ಕುರಿತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.








