ಬೆಂಗಳೂರು: ಹೊಸ ವರ್ಷ (New Year 2025) ಸಂಭ್ರಮದಲ್ಲಿರುವುದನ್ನೇ ದುರುಪಯೋಗ ಪಡಿಸಿಕೊಂಡ ವ್ಯಕ್ತಿಯೊಬ್ಬ ಯುವತಿಗೆ ಬ್ಯಾಡ್ ಟಚ್ ಮಾಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಯುವತಿ ದೂರು ದಾಖಲಿಸಿದ್ದಾರೆ.
ಪಬ್ಗೆ ತೆರಳಿದ್ದ ಯುವತಿಯೊಂದಿಗೆ ಈ ರೀತಿ ದುರ್ವರ್ತನೆ ತೋರಿದ್ದಾನೆ ಎನ್ನಲಾಗಿದೆ. ಕಾಡುಬೀಸನಹಳ್ಳಿಯ ಸೋಷಿಯಲ್ ಪಬ್ನಲ್ಲಿ (kadubeesanahalli Social Pub) ಘಟನೆ ನಡೆದಿದೆ. ಸದ್ಯ ಅಪರಿಚಿತ ಯುವಕನ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ (Marathahalli Police Station) ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಯುವತಿಯು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ತನ್ನ ಸ್ನೇಹಿತನೊಂದಿಗೆ ಕಾಡುಬೀಸನಹಳ್ಳಿಯ ಸೋಷಿಯಲ್ ಪಬ್ ಗೆ ಬಂದಿದ್ದಳು. ಈ ಸಂದರ್ಭದಲ್ಲಿ ಅಪರಿಚಿತ ಯುವಕ ಬ್ಯಾಡ್ ಟಚ್ ಮಾಡಿದ್ದಾನೆ. ಆಗ ಯುವತಿ ಪಬ್ನಲ್ಲೇ ಕಿರುಚಾಡಿದ್ದಾಳೆ, ಸರಿಯಾದ ಭದ್ರತೆ ಒದಗಿಸಿಲ್ಲ ಎಂದು ಪಬ್ ಸಿಬ್ಬಂದಿ ಮೇಲೆಯೂ ಆರೋಪ ಮಾಡಿದ್ದಾರೆ. ಯುವತಿ ಕೂಗಾಡುತ್ತಿದ್ದಂತೆ ಯುವಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ನಂತರ ಮಾರತ್ತಹಳ್ಳಿ ಠಾಣೆಗೆ ಯುವತಿ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಬ್ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.








