ಬೆಂಗಳೂರು: ಹೊಸ ವರ್ಷದ ಸಂದರ್ಭದಲ್ಲಿ ನಡೆದ ಪಾರ್ಟಿಯಲ್ಲಿ ಯುವತಿಯೊಂದಿಗೆ ಮದ್ಯ ಸೇವಿಸುವಂತೆ ಕಿರುಕುಳ ನೀಡಿ, ಅಸಭ್ಯ ವರ್ತನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಬೆಳ್ಳಂದೂರಿನ (Bellanduru) ಪಬ್ ವೊಂದರಲ್ಲಿ ನಡೆದಿದೆ. ಒಡಿಶಾ (Odisha) ಮೂಲದ ಯುವತಿ ಬಾಯ್‌ಫ್ರೆಂಡ್ ಜೊತೆ ಪಾರ್ಟಿಗೆಂದು ಬಂದಿದ್ದರು. ಈ ಸಂದರ್ಭದಲ್ಲಿ ಪಾರ್ಟಿ ಮಾಡುತ್ತಿದ್ದಾಗ ಕಿಡಿಗೇಡಿಯೊಬ್ಬ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾನೆ. ಆದರೆ ಯುವತಿ ಮದ್ಯವನ್ನು ನಿರಾಕರಿಸಿದ್ದಳು. ಆಗ ಎಣ್ಣೆ ಸೇವಿಸಲೇಬೇಕೆಂದು ಒತ್ತಾಯ ಮಾಡಿ ಅಸಭ್ಯ ವರ್ತನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಆತ ಒತ್ತಾಯ ಮಾಡುತ್ತಿದ್ದಂತೆ ಪಬ್ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಸಿಬ್ಬಂದಿ ಬರುತ್ತಲೇ ಯುವಕ ಪಬ್‌ನಿಂದ ಪರಾರಿಯಾಗಿದ್ದ. ಈ ಕುರಿತು ಯುವತಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








