ಬೆಂಗಳೂರು: ಒಂದು ಕಡೆ ದಿನೇದಿನೇ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಕೊರೊನಾ ವಾರಿಯರ್ಸ್‍ಗಳ ಹೋರಾಟದ ಕೂಗು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ನಿನ್ನೆಯಷ್ಟೇ ಗುತ್ತಿಗೆ ವೈದ್ಯರು ಮುಷ್ಕರ ನಡೆಸದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ಸರ್ಕಾರಕ್ಕೆ, ಈಗ ಆಶಾ ಕಾರ್ಯಕರ್ತೆಯರು ಹಾಗೂ ಗುತ್ತಿಗೆ ಆಯುಷ್ ವೈದ್ಯರ ಹೋರಾಟ ತಲೆ ನೋವಾಗಿ ಪರಿಣಮಿಸಿದೆ.
ನಾಳೆ ಕೆಲಸ ಬಹಿಷ್ಕರಿಸಿ ಆಶಾ ಕಾರ್ಯಕರ್ತೆಯರು ಹೋರಾಟ ಆರಂಭಿಸಲಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಮಾಡಿದ ಮನವಿಗೆ ಆಶಾ ಕಾರ್ಯಕರ್ತೆಯರು ಮಣಿದಿಲ್ಲ.
ಗೌರವ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವುದು ಕೊರೊನಾ ಚಿಕಿತ್ಸೆ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಸಾಮೂಹಿಕ ರಾಜೀನಾಮೆಗೆ ಮುಂದಾದ ಆಯುಷ್ ವೈದ್ಯರು
ಆಶಾ ಕಾರ್ಯಕರ್ತೆಯರ ಹೋರಾಟದ ಹಾದಿಯಲ್ಲೇ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಆಯುಷ್ ವೈದ್ಯರು, ನರ್ಸ್‍ಗಳು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಜುಲೈ15 ರಂದು ಸಾಮೂಹಿಕ ರಾಜೀನಾಮೆ ನೀಡಲು ಆಯುಷ್ ವೈದ್ಯರು ನಿರ್ಧರಿಸಿದ್ದಾರೆ. ಸಾಮಾನ್ಯ ವೈದ್ಯರು ಹಾಗೂ ತಮಗೆ ನೀಡುತ್ತಿರುವ ವೇತನ ತಾರತಮ್ಯ ಸರಿಪಡಿಸಿ ಒಂದೇ ವೇತನ ನೀಡಬೇಕು. ತಮ್ಮ ಹುದ್ದೆ ಖಾಯಂಗೊಳಿಸಬೇಕು ಎಂಬುದು ಇವರ ಪ್ರಮುಖ ಬೇಡಿಕೆಯಾಗಿದೆ.
ಕೊರೊನಾ ವಾರಿಯರ್ ಆಗಿ ನಾವೆಲ್ಲ ದುಡಿಯುತ್ತಿದ್ದೇವೆ. ನಮಗೆ ನ್ಯಾಯ ಸಿಗುತ್ತಿಲ್ಲ. ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನವಿದ್ದರೂ ರಾಜ್ಯ ಸರ್ಕಾರದಿಂದ ನಮಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಮನನೊಂದು ಸಾಮೂಹಿಕ ರಾಜೀನಾಮೆಗೆ ನಿರ್ಧಾರ ಮಾಡಿದ್ದೇವೆ ಎಂದು ಆಯುಷ್ ಫೆಡರೆಷನ್ ಆಫ್ ಇಂಡಿಯಾ ತಿಳಿಸಿದೆ.








