ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇಗುಲಕ್ಕೆ ಮಹಾಶಿವರಾತ್ರಿಯಂದು ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಆಗಮಿಸುತ್ತಾರೆ. ಪರಿಸರ ಸ್ವಚ್ಛತೆ ಸೇರಿದಂತೆ ಭಕ್ತರು ಜಾಗೃತರಾಗಿರುವ ಮೂಲಕ ಸುರಕ್ಷಿತ ಮತ್ತು ಸುಗಮ ಯಾತ್ರೆಯನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಸಲಹೆಗಳು
• ಪಾದಯಾತ್ರಿಗಳು ರಸ್ತೆಯ ಬಲಬದಿಯಲ್ಲಿ ಚಲಿಸಿ.
• ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಕಡ್ಡಾಯವಾಗಿ ಉಡುವ ಬಟ್ಟೆಯ ಬೆನ್ನಿನಲ್ಲಿ/ ತೋಳಿನಲ್ಲಿ/ತಲೆಯ ದಿರಿಸಿನಲ್ಲಿ ಪ್ರತಿಫಲಕ (Reflector) ಇರಲೇಬೇಕು.
• ಪಾದಯಾತ್ರೆಯಲ್ಲಿ ಬರುವಾಗ ಶಿವ ಪಂಚಾಕ್ಷರಿ ಮಂತ್ರ ಪಠಿಸುತ್ತಾ ಬನ್ನಿ.
• ನೀವು ವಾಸ್ತವ್ಯ ಇರುವ ಸ್ಥಳದಲ್ಲಿ ಮತ್ತು ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಇತ್ಯಾದಿ ಮಾಡುವುದರಿಂದ ಇತರ ಸದ್ಭಕ್ತರನ್ನು ಹೀಯಾಳಿಸಿದಂತಾಗುತ್ತದೆ.
• ತಂಗುವ ಸ್ಥಳ/ಅಡುಗೆ ಮಾಡಿದ ಸ್ಥಳವನ್ನು ಸ್ವಯಂಸ್ಪೂರ್ತಿಯಿಂದ ಸ್ವಚ್ಛ ಮಾಡಿರಿ.
• ನೀವು ಬಳಸುವ ಪ್ಲಾಸ್ಟಿಕ್ ಮತ್ತು ಕಸ-ಕಡ್ಡಿಗಳನ್ನು ಒಂದು ಚೀಲದಲ್ಲಿ ತುಂಬಿ ತ್ಯಾಜ್ಯ ವಿಲೇವಾರಿಗೆ ಇರುವ ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡಿ.
• ಪಾದಯಾತ್ರಿಗಳು ಏಕಬಳಕೆಯ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಳಸುವ ಬದಲು, ಒಂದೇ ಬಾಟಲಿಯಲ್ಲಿ ದಾರಿಯುದ್ದಕ್ಕೂ ವಿವಿಧೆಡೆ ಲಭ್ಯವಿರುವ ಕುಡಿಯುವ ನೀರನ್ನು ತುಂಬಿಸಿಕೊಂಡು ಮರುಬಳಕೆ ಮಾಡಿದರೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಿದಂತಾಗುತ್ತದೆ.







