ದೆಹಲಿ, ಅ.15: ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯನ್ನು ಆರು ಜಿಲ್ಲೆಗಳಿಂದ ಮೂರಕ್ಕೆ ಇಳಿಸಲಾಗಿದ್ದು, ಇದು ನಕ್ಸಲ್ (Naxal) ಮುಕ್ತ ಭಾರತ ನಿರ್ಮಾಣದತ್ತ ಕೇಂದ್ರ ಸರ್ಕಾರ (Central Government) ತೆಗೆದುಕೊಂಡಿರುವ ಮಹತ್ತರ ಹೆಜ್ಜೆಯಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಪ್ರಸ್ತುತ, ಛತ್ತೀಸ್‌ಗಢ ರಾಜ್ಯದ ಬಿಜಾಪುರ, ಸುಕ್ಮಾ ಮತ್ತು ನಾರಾಯಣಪುರ ಜಿಲ್ಲೆಗಳು ಮಾತ್ರ ಎಡಪಂಥೀಯ ಉಗ್ರವಾದ (Left Wing Extremism – LWE) ಅಥವಾ ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿದೆ.
“ಈ ಅಭಿವೃದ್ಧಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ನಕ್ಸಲ್ ಮುಕ್ತ ಭಾರತ ನಿರ್ಮಾಣವೆಂಬ ಗುರಿ ದಿಟ್ಟ ಹೆಜ್ಜೆಯೊಂದಿಗೆ ಸಾಗುತ್ತಿದೆ” ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ವೋಟಿಗಾಗಿ ಸ್ಟಾಲಿನ್ ‘ಉಚಿತವಾಗಿ ಹೆಂಡತಿ’ಯನ್ನು ಕೊಡುತ್ತಾರೆ! ಎಐಎಡಿಎಂಕೆ ನಾಯಕನ ಹೇಳಿಕೆಗೆ
2025ರ ವರೆಗೆ ನಡೆದ ಕಾರ್ಯಾಚರಣೆಗಳಲ್ಲಿ 312 ನಕ್ಸಲ್ ಉಗ್ರರನ್ನು ಸ್ಥಳದಲ್ಲೇ ನಿರ್ಮೂಲನೆ ಮಾಡಲಾಗಿದೆ. ಇದು ಇತಿಹಾಸದಲ್ಲಿ ದಾಖಲಾದ ಗರಿಷ್ಠ ಸಂಖ್ಯೆ ಎನ್ನುತ್ತದೆ. ಇದರ ಜೊತೆಗೆ 800ಕ್ಕಿಂತ ಹೆಚ್ಚು ನಕ್ಸಲ್ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಸುಮಾರು 1,600ಕ್ಕೂ ಹೆಚ್ಚು ಉಗ್ರರು ಶರಣಾಗಿ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.
ರಾಷ್ಟ್ರೀಯ ಕ್ರಿಯಾ ಯೋಜನೆ ಹಾಗೂ ನಕ್ಸಲ್ ನಿಗ್ರಹ ನೀತಿಗಳನ್ನು ಗಟ್ಟಿಯಾಗಿ ಅನುಷ್ಠಾನಗೊಳಿಸಿ, 2026ರ ಮಾರ್ಚ್ 31ರೊಳಗೆ ನಕ್ಸಲ್ ಪೀಡೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








