ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮಹಿಳೆಯರನ್ನು ಕೀಳಾಗಿ ಕಾಣುವಂತಹ ಹೇಳಿಕೆ ನೀಡಿ ಎಐಎಡಿಎಂಕೆ ಪಕ್ಷದ ಮಾಜಿ ಸಚಿವ ಹಾಗೂ ರಾಜ್ಯಸಭಾ ಸಂಸದ ಸಿ.ವಿ. ಷಣ್ಮುಗಂ ಅವರು ಭಾರೀ ವಿವಾದದ ಕಿಡಿ ಹೊತ್ತಿಸಿದ್ದಾರೆ. ಉಚಿತ ಯೋಜನೆಗಳ ಕುರಿತು ಡಿಎಂಕೆ ಸರ್ಕಾರದ ಮೇಲೆ ವಾಗ್ದಾಳಿ ನಡೆಸುವ ಭರದಲ್ಲಿ, “ವೋಟು ಸಿಗುತ್ತದೆ ಎಂದಾದರೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಜನರಿಗೆ ಉಚಿತವಾಗಿ ಹೆಂಡತಿಯನ್ನೂ ಕೊಡಲು ಹೇಸುವುದಿಲ್ಲ” ಎಂದು ಹೇಳುವ ಮೂಲಕ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ವಿವಾದಕ್ಕೆ ಕಾರಣವಾದ ಹೇಳಿಕೆ ಏನು?
ಎಐಎಡಿಎಂಕೆ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ತರಬೇತಿ ಸಭೆಯಲ್ಲಿ ಮಾತನಾಡಿದ ಷಣ್ಮುಗಂ, ಡಿಎಂಕೆಯ ಉಚಿತ ಭಾಗ್ಯಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದರು. “ಚುನಾವಣೆ ಬಂದಾಗ ಇವರು ಬಗೆಬಗೆಯ ಘೋಷಣೆಗಳನ್ನು ಮಾಡುತ್ತಾರೆ. ಮಿಕ್ಸರ್, ಗ್ರೈಂಡರ್, ಕುರಿ, ದನಗಳನ್ನು ಉಚಿತವಾಗಿ ಕೊಡುತ್ತೇವೆ ಎನ್ನುತ್ತಾರೆ. ಇದೇ ರೀತಿ ಮುಂದುವರಿದರೆ, ಮುಂದೆ ವೋಟುಗಳಿಗಾಗಿ ಪ್ರತಿಯೊಬ್ಬರಿಗೂ ಉಚಿತವಾಗಿ ಹೆಂಡತಿಯನ್ನು ಕೊಟ್ಟರೂ ಕೊಡಬಹುದು, ಯಾರಿಗ್ಗೊತ್ತು?” ಎಂದು ವಿವಾದಾತ್ಮಕವಾಗಿ ನುಡಿದರು.
ಮುಂದುವರಿದು, “ಕರುಣಾನಿಧಿಯವರ ಮಗನಾಗಿರುವ ಎಂ.ಕೆ. ಸ್ಟಾಲಿನ್ಗೆ ಇಂತಹ ಭರವಸೆಗಳನ್ನು ನೀಡುವ ಸಾಮರ್ಥ್ಯವಿದೆ” ಎಂದು ವ್ಯಂಗ್ಯವಾಡಿದರು. ಅವರ ಈ ಹೇಳಿಕೆಯು ಮಹಿಳೆಯರನ್ನು ಸರ್ಕಾರದ ಉಚಿತ ವಸ್ತುಗಳಿಗೆ ಹೋಲಿಕೆ ಮಾಡಿದಂತಿದೆ ಎಂದು ತೀವ್ರ ಖಂಡನೆ ವ್ಯಕ್ತವಾಗಿದೆ.
ಡಿಎಂಕೆ ಸಚಿವೆಯಿಂದ ತೀಕ್ಷ್ಣ ತಿರುಗೇಟು
ಷಣ್ಮುಗಂ ಅವರ ಹೇಳಿಕೆಗೆ ಡಿಎಂಕೆಯ ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಸಚಿವೆ ಗೀತಾ ಜೀವನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಷಣ್ಮುಗಂ ಅವರ ಮಾತುಗಳು ಮಹಿಳೆಯರನ್ನು ಕೀಳಾಗಿ ಕಾಣುವ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಮಹಿಳೆಯರ ಬಗ್ಗೆ ಎಐಎಡಿಎಂಕೆಗೆ ಇರುವ ವಿಕೃತ ಮನೋಭಾವ ಮತ್ತು ದುರುದ್ದೇಶವನ್ನು ಜಗಜ್ಜಾಹೀರು ಮಾಡಿದೆ,” ಎಂದು ಅವರು ಕಿಡಿಕಾರಿದ್ದಾರೆ.
ಮಹಿಳಾ ಸಬಲೀಕರಣಕ್ಕಾಗಿ ಡಿಎಂಕೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಪಟ್ಟಿ ಮಾಡಿದ ಅವರು, “ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣದ ‘ವಿಡಿಯಾಲ್ ಪಯಣಂ’, ‘ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆ’ ಅಡಿಯಲ್ಲಿ ಮಾಸಿಕ 1000 ರೂ. ನೆರವು, ವಿದ್ಯಾರ್ಥಿನಿಯರಿಗಾಗಿ ‘ಪುದುಮೈ ಪೆನ್ ಯೋಜನೆ’, ದುಡಿಯುವ ಮಹಿಳೆಯರಿಗಾಗಿ ‘ತೋಳಿ ಹಾಸ್ಟೆಲ್’ಗಳು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಸಾಲದ ಮಿತಿಯನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ನಾವು ಜಾರಿಗೆ ತಂದಿದ್ದೇವೆ. ಆದರೆ ಎಐಎಡಿಎಂಕೆಗೆ ಈ ಅಭಿವೃದ್ಧಿ ಸಹಿಸಲು ಆಗುತ್ತಿಲ್ಲ,” ಎಂದು ಆರೋಪಿಸಿದ್ದಾರೆ.
ಪಳನಿಸಾಮಿ ಮೌನವೇಕೆ? ಜಯಲಲಿತಾ ಇದ್ದಿದ್ದರೆ ಹೀಗೆ ಮಾತಾಡುತ್ತಿದ್ದರಾ?
ಗೀತಾ ಜೀವನ್ ಅವರು ಷಣ್ಮುಗಂ ಅವರಿಗೆ ನೇರ ಸವಾಲು ಹಾಕಿದ್ದಾರೆ. “ಒಂದು ವೇಳೆ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಇಂದು ಬದುಕಿದ್ದಿದ್ದರೆ, ಷಣ್ಮುಗಂ ಅವರಿಗೆ ಇಂತಹ ಮಾತುಗಳನ್ನಾಡುವ ಧೈರ್ಯವಿರುತ್ತಿತ್ತೇ?” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಇಷ್ಟೊಂದು ದೊಡ್ಡ ವಿವಾದವಾದರೂ ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸಾಮಿ ಅವರು ಈ ಹೇಳಿಕೆಯನ್ನು ಖಂಡಿಸದೆ ಮೌನ ವಹಿಸಿರುವುದು ನಾಚಿಕೆಗೇಡು ಎಂದು ಟೀಕಿಸಿದ್ದಾರೆ.
ಡಿಎಂಕೆ ಸರ್ಕಾರದ ಮಹಿಳಾ ಪರ ಯೋಜನೆಗಳನ್ನು ಎಐಎಡಿಎಂಕೆ ಮತ್ತು ಅದರ ಮಿತ್ರಪಕ್ಷಗಳ ನಾಯಕರು ಈ ಹಿಂದೆಯೂ ಹಲವು ಬಾರಿ ಅವಹೇಳನ ಮಾಡಿದ್ದಾರೆ ಎಂದು ಗೀತಾ ಜೀವನ್ ನೆನಪಿಸಿದ್ದಾರೆ.
* ಎಡಪ್ಪಾಡಿ ಪಳನಿಸಾಮಿ ಅವರು ಉಚಿತ ಬಸ್ ಪ್ರಯಾಣ ಯೋಜನೆಯನ್ನು “ಲಿಪ್ಸ್ಟಿಕ್ ಸವರಿದ ಬಸ್ಗಳು” ಎಂದು ಕರೆದಿದ್ದರು.
* ನಟಿ ಹಾಗೂ ರಾಜಕಾರಣಿ ಖುಷ್ಬು ಅವರು ಮಹಿಳೆಯರಿಗೆ ನೀಡುವ 1000 ರೂ. ಸಹಾಯಧನವನ್ನು “ಭಿಕ್ಷೆ” ಎಂದು ಜರಿದಿದ್ದರು.
* ಪಿಎಂಕೆ ಪಕ್ಷದ ಸೌಮ್ಯ ಅನ್ಬುಮಣಿ ಕೂಡ ಇದೇ ಯೋಜನೆಯನ್ನು ಅಪಹಾಸ್ಯ ಮಾಡಿದ್ದರು.
ಎಂ.ಕೆ. ಸ್ಟಾಲಿನ್ ಅವರ ನಾಯಕತ್ವದಲ್ಲಿ ತಮಿಳುನಾಡು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ಪ್ರಗತಿಯನ್ನು ಸಹಿಸದ ಎಐಎಡಿಎಂಕೆ ನಾಯಕರು ಹತಾಶೆಯಿಂದ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ. ಈ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ..








