ಬೆಂಗಳೂರು ನಗರದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಭಾರೀ ದರ ಏರಿಕೆ ಮೂಲಕ ಜನರ ಅಸಮಾಧಾನಕ್ಕೆ ಕಾರಣವಾಗಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ಮತ್ತೆ ಫೆಬ್ರವರಿಯಿಂದ ಮೆಟ್ರೋ ದರ ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ, ಈ ಬಾರಿ ಸುಮಾರು 5%ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಈ ನಿರ್ಧಾರಕ್ಕೆ ಕಾರಣವಾಗಿ ಶುಲ್ಕ ನಿಗದಿ ಸಮಿತಿ ನೀಡಿರುವ ಶಿಫಾರಸುಗಳನ್ನು BMRCL ಮುಂದಿಟ್ಟಿದೆ. ಸಮಿತಿಯ ಪ್ರಕಾರ, ಪ್ರತಿ ವರ್ಷ ಕನಿಷ್ಠ 5% ದರ ಹೆಚ್ಚಳ ಮಾಡಬೇಕು ಎಂದು ಸೂಚಿಸಲಾಗಿದೆ. ಅದನ್ನು ಅನುಸರಿಸಿ ಹೊಸ ದರ ಪರಿಷ್ಕರಣೆ ಜಾರಿಗೆ ತರಲು ಮೆಟ್ರೋ ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ.
ಗಮನಾರ್ಹ ಸಂಗತಿಯೆಂದರೆ, 2025ರಲ್ಲಿ ನಮ್ಮ ಮೆಟ್ರೋ ದರವನ್ನು ಒಂದೇ ಬಾರಿ 71%ರಷ್ಟು ಹೆಚ್ಚಿಸಲಾಗಿತ್ತು. ಇದರಿಂದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ದರ ಏರಿಕೆಯ ಬಳಿಕ ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿ ಪರಿಣಮಿಸಿತ್ತು ಎಂಬ ಟೀಕೆಗಳು ಕೇಳಿಬಂದಿದ್ದವು.
ನಿತ್ಯ ಮೆಟ್ರೋ ಅವಲಂಬಿಸಿರುವ ಉದ್ಯೋಗಸ್ಥರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ನಾಗರಿಕರಿಗೆ ಈ ಮತ್ತೊಂದು ದರ ಏರಿಕೆ ದೊಡ್ಡ ಹೊರೆ ಆಗುವ ಸಾಧ್ಯತೆ ಇದೆ. ಈಗಾಗಲೇ ಬಸ್ಸು, ಆಟೋ, ಇಂಧನ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನತೆಗೆ, ಮೆಟ್ರೋ ದರ ಹೆಚ್ಚಳ ಮತ್ತಷ್ಟು ಸಂಕಷ್ಟ ತರಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಫೆಬ್ರವರಿಯಿಂದಲೇ ಹೊಸ ದರ ಜಾರಿಗೆ ಬರುವುದೇ ಎಂಬುದರ ಕುರಿತು BMRCL ಅಧಿಕೃತ ಘೋಷಣೆ ಇನ್ನಷ್ಟೇ ಹೊರಬರಬೇಕಿದೆ. ಆದರೆ, ದರ ಏರಿಕೆಯ ಸೂಚನೆಗಳನ್ನು ಬೆಂಗಳೂರಿನ ಪ್ರಯಾಣಿಕರಲ್ಲಿ ಆತಂಕ ಹಾಗೂ ಚರ್ಚೆಗೆ ಕಾರಣವಾಗಿವೆ.








