ಕೊರೊನಾಗೆ ಬೆಚ್ಚಿ ಬಿದ್ದ ಉಪ್ಪಿನಂಗಡಿ- ಜಿಲ್ಲೆಯಲ್ಲಿ ಒಂದೇ ದಿನ 238 ಪ್ರಕರಣ
ಮಂಗಳೂರು, ಜುಲೈ 16: ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಹಳೇ ಬಸ್ ನಿಲ್ದಾಣದ ಬಳಿಯ 25ರ ಹರೆಯದ ನಿವಾಸಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಷ್ಟೇ ಅಲ್ಲ ಈಗಾಗಲೇ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ್ಟಿಬೈಲು ನಿವಾಸಿ 70 ವರ್ಷದ ವ್ಯಕ್ತಿಯ ಕುಟುಂಬ ಸದಸ್ಯರಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 238 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಂದೇ ದಿನ ಅತ್ಯಧಿಕ ಪ್ರಕರಣ ದಾಖಲಾಗಿದೆ. ಈ ಪೈಕಿ 106 ಮಂದಿಯಲ್ಲಿ ಐ.ಎಲ್.ಐ ಪ್ರಕರಣ ಪತ್ತೆಯಾಗಿದ್ದರೆ, 17 ಮಂದಿಯಲ್ಲಿ ಸಾರಿ ಪ್ರಕರಣ ಪತ್ತೆಯಾಗಿದೆ. 73 ಮಂದಿ ಕೊರೊನಾ ಸೋಂಕಿತರ ಸೋಂಕಿನ ಮೂಲ ಪತ್ತೆಯಾಗಿಲ್ಲ. 23 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದ್ದರೆ, ವಿದೇಶದಿಂದ ಬಂದ 19 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 2763 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 1163 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1537 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಗುರುವಾರ ಒಂದೇ ದಿನ ಆರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಕೊರೊನಾಗೆ ಬಲಿಯಾದವರ ಸಂಖ್ಯೆ 63 ಕ್ಕೆ ಏರಿದೆ.








