ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಪ್ರಕ್ರಿಯೆಯ ವೇಳೆ ನಡೆದಿದ್ದ ಆಂತರಿಕ ಬೆಳವಣಿಗೆಗಳ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡುವಂತೆ ಕೆಪಿಸಿಸಿ ಸಭೆಯಲ್ಲೇ ಬಹಿರಂಗವಾಗಿ ಪಟ್ಟು ಹಿಡಿದಿದ್ದ ಜಮೀರ್, ಒಂದು ವೇಳೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರದಿದ್ದರೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೈಕಮಾಂಡ್ ನಾಯಕರ ಎದುರೇ ಸವಾಲು ಹಾಕಿದ್ದ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ವೇಳೆ ನಡೆದ ಸಮಾಲೋಚನಾ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲೇ ನಾನು ನೇರವಾಗಿಯೇ ಮಾತನಾಡಿದ್ದೆ. ದಾವಣಗೆರೆ ಟಿಕೆಟ್ಗಾಗಿ ನಾನು 7 ಮುಸ್ಲಿಂ ನಾಯಕರ ಹೆಸರನ್ನು ಪ್ರಸ್ತಾಪಿಸಿದ್ದೆ. ಅಷ್ಟೇ ಅಲ್ಲದೆ, ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು. ಒಂದು ವೇಳೆ ಗೆಲುವು ಸಾಧ್ಯವಾಗದಿದ್ದರೆ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಓಪನ್ ಆಗಿ ಹೇಳಿದ್ದೆ ಎಂದು ತಿಳಿಸಿದರು.
ಆರಂಭದಲ್ಲಿ ಜಬ್ಬಾರ್ ಅವರಿಗೆ ಟಿಕೆಟ್ ನೀಡುವಂತೆ ಕೇಳಿಕೊಂಡಿದ್ದೆ. ಆದರೆ ಜಬ್ಬಾರ್ ಅವರು ಈಗಾಗಲೇ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರಿಗೆ ಮತ್ತೆ ಟಿಕೆಟ್ ಕೇಳುವುದು ತಪ್ಪು ಎಂಬುದು ನಂತರ ಅರಿವಾಯಿತು. ಹೀಗಾಗಿ ಜಬ್ಬಾರ್ ಬದಲಿಗೆ ಸಮುದಾಯದ ಇತರ 7 ನಾಯಕರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೆ. ಆದರೆ ಅಂತಿಮವಾಗಿ ಟಿಕೆಟ್ ಸಿಗದಿದ್ದಾಗ ಅಸಮಾಧಾನಗೊಂಡಿದ್ದು ನಿಜ. ಆದರೆ ಈಗ ಆ ಎಲ್ಲ ಭಿನ್ನಾಭಿಪ್ರಾಯಗಳು ಮರೆತುಹೋಗಿವೆ ಮತ್ತು ಪಕ್ಷದ ಹಿತದೃಷ್ಟಿಯಿಂದ ಎಲ್ಲವೂ ಸರಿಹೋಗಿದೆ ಎಂದು ಜಮೀರ್ ಸ್ಪಷ್ಟಪಡಿಸಿದರು.
ನಾನು ಕೇವಲ ಟಿಕೆಟ್ ಕೇಳಿ ಸುಮ್ಮನಾಗಲಿಲ್ಲ. ಟಿಕೆಟ್ ಘೋಷಣೆಯಾದ ನಂತರ ದಾವಣಗೆರೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದೇನೆ. ರೋಡ್ ಶೋ ಹಾಗೂ ಸುದ್ದಿಗೋಷ್ಠಿಗಳನ್ನು ನಡೆಸುವ ಮೂಲಕ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದೇನೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮನೆಯಲ್ಲಿ ಊಟವನ್ನೂ ಮಾಡಿದ್ದೇನೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ ಎಂದು ಅವರು ವಿವರಿಸಿದರು.
ಇದೇ ವೇಳೆ ಕಾಂಗ್ರೆಸ್ ಶಾಸಕರು ದೆಹಲಿಗೆ ಭೇಟಿ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ರಾಜಕೀಯದಲ್ಲಿ ಎಲ್ಲರಿಗೂ ಆಕಾಂಕ್ಷೆಗಳಿರುವುದು ಸಹಜ. ಶಾಸಕರಿಗೆ ಮಂತ್ರಿಯಾಗಬೇಕು ಎಂಬ ಆಸೆ ಇರುವುದರಲ್ಲಿ ಯಾವುದೇ ತಪ್ಪಿಲ್ಲ. ನನಗೂ ಕೂಡ ಮುಂದಿನ ದಿನಗಳಲ್ಲಿ ದೊಡ್ಡ ಸ್ಥಾನಕ್ಕೇರಬೇಕು ಎಂಬ ಆಸೆ ಇರುವುದಿಲ್ಲವೇ? ಎಂದು ಪ್ರಶ್ನಿಸಿದರು. ಬಾಗಲಕೋಟೆ ಚುನಾವಣಾ ಜವಾಬ್ದಾರಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿನ ಜವಾಬ್ದಾರಿಯನ್ನು ನಸೀರ್ ಅಹಮದ್ ಅವರಿಗೆ ನೀಡಲಾಗಿತ್ತು. ಅವರು ಅಲ್ಲಿ ಹತ್ತು ದಿನಗಳ ಕಾಲ ಉಳಿದು ಕೆಲಸ ಮಾಡಿದ್ದಾರೆ. ಯಾರಾದರೂ ಆರೋಪ ಮಾಡುವುದಿದ್ದರೆ ನೇರವಾಗಿ ಹೆಸರು ಹೇಳಿ ಮಾಡಲಿ ಎಂದು ಸವಾಲು ಹಾಕಿದರು.







