ಉಡುಪಿ ಜಿಲ್ಲಾ ರಾಜಕಾರಣದಲ್ಲಿ ಈಗ ಸೌಹಾರ್ದತೆಯ ಹೆಸರಿನಲ್ಲಿ ನಡೆದ ಒಂದು ಘಟನೆ ಭಾರಿ ಕಿಚ್ಚು ಹಚ್ಚಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸತ್ಯಾಸತ್ಯತೆ ತಿಳಿಯದೆ ಉಡುಪಿ ಬಿಜೆಪಿಯವರಿಗೆ ನೀಡಿದ ಸೌಹಾರ್ದತೆಯ ಪಾಠ ಈಗ ಅವರಿಗೆ ತಿರುಗುಬಾಣವಾಗಿದೆ. ಸ್ವಂತ ತಾಯಿಯನ್ನೇ ಸಮಾಜದ ಮುಂದೆ ನೆರೆಮನೆಯವರೆಂದು ಪರಿಚಯಿಸಿದ ಬುರ್ಖಾಧಾರಿ ಮಹಿಳೆಯರ ನಾಟಕವನ್ನು ಬಿಜೆಪಿ ಮಹಿಳಾ ಮೋರ್ಚಾ ಬಯಲಿಗೆಳೆದಿದ್ದು, ಸಚಿವೆಯ ಅವಸರದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.
ಇತ್ತೀಚೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾದ ಇಬ್ಬರು ಹಿಜಾಬ್ ಮತ್ತು ಬುರ್ಖಾಧಾರಿ ಮಹಿಳೆಯರು, ಗಿರಿಜಾ ಶೆಟ್ಟಿಗಾರ್ ಎಂಬ ಹಿಂದೂ ಮಹಿಳೆಯನ್ನು ಕರೆತಂದು ಈಕೆ ನಮ್ಮ ನೆರೆಮನೆಯವರು, ಇವರಿಗೆ ವಸತಿ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದ್ದರು. ಈ ದೃಶ್ಯವನ್ನು ಕಂಡ ಸಚಿವರು, ಮುಸ್ಲಿಂ ಮಹಿಳೆಯರು ಹಿಂದೂ ಮಹಿಳೆಯ ಪರವಾಗಿ ಬಂದು ಸಹಾಯ ಕೇಳುತ್ತಿರುವುದು ಸೌಹಾರ್ದತೆಗೆ ಸಾಕ್ಷಿ ಎಂದು ಬಣ್ಣಿಸಿದ್ದರು. ಅಷ್ಟೇ ಅಲ್ಲದೆ, ಉಡುಪಿಯ ಬಿಜೆಪಿ ನಾಯಕರು ಇವರಿಂದ ಸೌಹಾರ್ದತೆಯನ್ನು ಕಲಿಯಬೇಕು ಎಂದು ಮಾಧ್ಯಮಗಳ ಮುಂದೆ ಬಿಟ್ಟಿ ಉಪದೇಶ ನೀಡಿದ್ದರು.
ಬಯಲಾದ ಅಸಲಿ ಸತ್ಯ
ಆದರೆ ಈ ಘಟನೆಯ ಹಿಂದೆ ದೊಡ್ಡ ಸುಳ್ಳಡಗಿದೆ ಎಂಬುದು ಈಗ ಬಹಿರಂಗವಾಗಿದೆ. ಸಚಿವರ ಮುಂದೆ ಹಿಂದೂ ಮಹಿಳೆಯ ನೆರೆಮನೆಯವರೆಂದು ಹೇಳಿಕೊಂಡಿದ್ದ ಬುರ್ಖಾಧಾರಿ ಮಹಿಳೆಯರಲ್ಲಿ ಒಬ್ಬರು ಆಕೆಯ ಸ್ವಂತ ಮಗಳೇ ಆಗಿದ್ದಾರೆ. ಆಕೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದು, ಸಚಿವರ ಮುಂದೆ ತನ್ನ ಅಸ್ಮಿತೆಯನ್ನು ಮರೆಮಾಚಿ ನಾಟಕವಾಡಿದ್ದಾರೆ ಎಂಬುದು ಬಿಜೆಪಿ ಮಹಿಳಾ ಮೋರ್ಚಾದ ಆರೋಪವಾಗಿದೆ. ಪ್ರಚಾರಕ್ಕಾಗಿ ಮತ್ತು ಸಚಿವರನ್ನು ಯಾಮಾರಿಸಲು ಸ್ವಂತ ತಾಯಿಯನ್ನೇ ನೆರೆಮನೆಯವಳು ಎಂದು ಹೇಳುವ ಇಂತಹ ವ್ಯಕ್ತಿಗಳಿಂದ ಬಿಜೆಪಿ ಸೌಹಾರ್ದತೆ ಕಲಿಯಬೇಕಿಲ್ಲ ಎಂದು ಬಿಜೆಪಿ ನಾಯಕಿ ನೀತಾ ಪ್ರಭು ಕಿಡಿ ಕಾರಿದ್ದಾರೆ.
ಸಚಿವೆಗೆ ಬಿಜೆಪಿ ಮಹಿಳಾ ಮೋರ್ಚಾ ಎಚ್ಚರಿಕೆ
ಈ ಕುರಿತು ಆಕ್ರೋಶ ಹೊರಹಾಕಿರುವ ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಿಲ್ಲೆಗೆ ಕೇವಲ ಅತಿಥಿಯಂತೆ ಬಂದು ಹೋಗುತ್ತಾರೆ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸದ ಅವರು, ಬಿಜೆಪಿ ನಾಯಕರನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಹಿಜಾಬ್ ಬುರ್ಖಾ ಧರಿಸಿ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದವರೇ ಇಂದು ಸಚಿವರನ್ನು ದಾರಿ ತಪ್ಪಿಸಿದ್ದಾರೆ. ಇನ್ನಾದರೂ ಸಚಿವರು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ಎಚ್ಚರಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಉಗ್ರ ಹೋರಾಟದ ಮುನ್ಸೂಚನೆ
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವ ಉಸ್ತುವಾರಿ ಸಚಿವರು ಸೌಹಾರ್ದತೆಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಉಡುಪಿಯ ಬಿಜೆಪಿ ಶಾಸಕರು ಮತ್ತು ಸಂಸದರು ಜಾತಿ ಧರ್ಮದ ಭೇದವಿಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಸಚಿವರು ಇನ್ನು ಮುಂದೆಯೂ ಬಿಜೆಪಿ ನಾಯಕರ ವಿರುದ್ಧ ಇಂತಹ ಅವಿವೇಕದ ಮಾತುಗಳನ್ನು ಮುಂದುವರಿಸಿದರೆ, ಮಹಿಳಾ ಮೋರ್ಚಾ ವತಿಯಿಂದ ಅವರ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ, ಮಾನವೀಯತೆಯ ಮುಖವಾಡದ ಹಿಂದೆ ನಡೆದ ಈ ಘಟನೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಉಡುಪಿ ಬಿಜೆಪಿ ಮಹಿಳಾ ಮೋರ್ಚಾ ಪ್ರಬಲ ಟಕ್ಕರ್ ನೀಡಿದೆ.








