ಮಂಡ್ಯ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನದಲ್ಲಿ, ಪುಟ್ಟಣ್ಣಯ್ಯ ಫೌಂಡೇಶನ್, ಸೆಂಟರ್ ಫಾರ್ ಸಸ್ಟೇನಬಲ್ ಅಗ್ರಿಕಲ್ಚರ್, ಆಶಾ ಸಹಯೋಗದಲ್ಲಿ ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಜೈವಿಕ ಸಂಪನ್ಮೂಲ ಕೇಂದ್ರ’ (BRC) ದ ಉದ್ಘಾಟನಾ ಸಮಾರಂಭ ನಾಳೆ (ಸೆಪ್ಟೆಂಬರ್ 04, ಶುಕ್ರವಾರ) ಮಧ್ಯಾಹ್ನ 3:00 ಗಂಟೆಗೆ ಜಕ್ಕನಹಳ್ಳಿಯಲ್ಲಿ ಜರುಗಲಿದೆ.
“ನೈಸರ್ಗಿಕ ಕೃಷಿಯತ್ತ ನಮ್ಮ ಹೆಜ್ಜೆ – ಸಮೃದ್ಧ ಕೃಷಿಕನ ಹೊಸ ಮುಂಜಾವು” ಎಂಬ ಆಶಯದೊಂದಿಗೆ ಆರಂಭವಾಗುತ್ತಿರುವ ಈ ಕೇಂದ್ರವು, ತಾಲೂಕಿನ ಕೃಷಿ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದೆ.
ಕೇಂದ್ರದ ಪ್ರಮುಖ ಸೇವೆಗಳು ಹಾಗೂ ಉದ್ದೇಶಗಳು:
ಜೈವಿಕ ಒಳಸುರಿಗಳ ಲಭ್ಯತೆ: ರೈತರಿಗೆ ಉತ್ತಮ ಗುಣಮಟ್ಟದ ಜೈವಿಕ ರಸಗೊಬ್ಬರಗಳು, ಬೆಳೆ ಮತ್ತು ಕೀಟ ನಿರ್ವಹಣೆಗೆ ಅಗತ್ಯವಾದ ಜೈವಿಕ ಒಳಸುರಿಗಳು ಹಾಗೂ ಸಾವಯವ ಕೃಷಿ ಉಪಕರಣಗಳು ಒಂದೇ ಸೂರಿನಡಿ ದೊರೆಯಲಿವೆ.
ತರಬೇತಿ ಮತ್ತು ಮಾರ್ಗದರ್ಶನ: ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಕುರಿತು ರೈತರಿಗೆ ಅಗತ್ಯ ತರಬೇತಿ ಹಾಗೂ ತಜ್ಞರಿಂದ ಸೂಕ್ತ ಮಾರ್ಗದರ್ಶನ ನೀಡಲಾಗುವುದು.
ಮಣ್ಣಿನ ಆರೋಗ್ಯ ಮತ್ತು ಸುಸ್ಥಿರ ಕೃಷಿ: ಮಣ್ಣಿನ ಫಲವತ್ತತೆ ಮತ್ತು ಆರೋಗ್ಯವನ್ನು ವೃದ್ಧಿಸಿ, ದೀರ್ಘಕಾಲೀನ ಸುಸ್ಥಿರ ಕೃಷಿಗೆ ಅಗತ್ಯ ಬೆಂಬಲವನ್ನು ಈ ಕೇಂದ್ರ ಒದಗಿಸಲಿದೆ.
ಈ ಜೈವಿಕ ಸಂಪನ್ಮೂಲ ಕೇಂದ್ರವು ನೈಸರ್ಗಿಕ ಕೃಷಿ ಮಾಡಲು ಬಯಸುವ ರೈತರಿಗೆ ಮಾಹಿತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ.








