ಪಿಯುಸಿ ಮುಗಿಸಿದ ನಂತರ, ಅಸ್ಸಾಂನ ದಿಬ್ರುಗಢದ ಯುವತಿ ಬೊನಿತಾ ದಾಸ್ಗೆ ತಾನು ಅಂದುಕೊಂಡಂತೆ ಬದುಕಬೇಕು ಅನ್ನೋ ಕನಸು. ಅದಕ್ಕವರು ಇನ್ಸ್ಟಾಮಾರ್ಟ್ನಲ್ಲಿ ಡೆಲಿವರಿ ಪಾರ್ಟ್ನರ್ ಆಗಿ ಕೆಲಸ ಶುರು ಮಾಡಿದರು. ತನಗೆ ತಾನೇ ‘ಬಾಸ್’ ಆಗುವ ಅವಕಾಶವನ್ನು ಈ ಕೆಲಸ ಅವರಿಗೆ ಒದಗಿಸಿಕೊಟ್ಟಿತು. ಆದರೆ, ಬೊನಿತಾ ಪಾಲಿಗೆ ಸ್ವಾತಂತ್ರ್ಯ ಎಂದರೆ ಕೇವಲ ತನಗಾಗಿ ದುಡಿಯುವುದಷ್ಟೇ ಆಗಿರಲಿಲ್ಲ.
ಅಸ್ಸಾಂನಲ್ಲಿ ಭೀಕರ ಪ್ರವಾಹ ಬಂದಾಗ, ತನ್ನ ಸುತ್ತಮುತ್ತಲಿನ ಜನರ ಕಣ್ಣೀರು ಒರೆಸಲೂ ಆಕೆ ಮುಂದಾದರು. ಅವರ ಈ ನಡೆ ನಿಜಕ್ಕೂ ಸ್ಫೂರ್ತಿದಾಯಕ.
ಹಾಗೆ ನೋಡಿದರೆ ಇತರ ಯುವಜನರಂತೆ ಬೊನಿತಾ ಕೂಡ ಆರಂಭದಲ್ಲಿ ಕೆಲವು ಕೆಲಸಗಳನ್ನು ಮಾಡಿದ್ದರು. ಆದರೆ ದಿನಕ್ಕೆ 8-9 ಗಂಟೆಗಳ ಕಾಲ ಕಷ್ಟಪಟ್ಟು ದುಡಿದರೂ ಬರುವ ಸಂಬಳ ತೀರಾ ಕಡಿಮೆಯಿತ್ತು. ಕಟ್ಟುನಿಟ್ಟಾದ ಕೆಲಸದ ವೇಳಾಪಟ್ಟಿ ಆಕೆಗೆ ಇಷ್ಟವಿರಲಿಲ್ಲ. ದಿಬ್ರುಗಢದಲ್ಲಿ ಮೇ 2026ರಲ್ಲಿ ಇನ್ಸ್ಟಾಮಾರ್ಟ್ ಸೇವೆ ಆರಂಭವಾದಾಗ, ಅದರ ಮೊದಲ ಡೆಲಿವರಿ ಪಾರ್ಟ್ನರ್ಗಳಲ್ಲಿ ಒಬ್ಬರಾಗಿ ಆಕೆ ಸೇರ್ಪಡೆಯಾದರು.
ಈ ಒಂದು ನಿರ್ಧಾರ ಆಕೆಯ ದಿನಚರಿಯನ್ನೇ ಬದಲಾಯಿಸಿತು. ತನಗೆ ಅನುಕೂಲವಾದ ಸಮಯದಲ್ಲಿ ಕೆಲಸ ಮಾಡುತ್ತಲೇ ಅವರು ತಮ್ಮ ಆದಾಯವನ್ನು ಮೂರು ಪಟ್ಟು ಹೆಚ್ಚಿಸಿಕೊಂಡರು. ಇದರಿಂದ ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಕುಟುಂಬವನ್ನು ಬೆಂಬಲಿಸುವ ಶಕ್ತಿಯೂ ಆಕೆಗೆ ಸಿಕ್ಕಿತು.
ಮನೆ ಕಟ್ಟುವ ಜವಾಬ್ದಾರಿ ಮತ್ತು ಬೇಕರಿಯ ಕನಸು
ಹೀಗೆ ದುಡಿದು ಕೂಡಿಟ್ಟ ಹಣದಲ್ಲಿ ಬೊನಿತಾ ತನ್ನ ಸಹೋದರನ ಜೊತೆಗೂಡಿ ಕುಟುಂಬಕ್ಕಾಗಿ ಒಂದು ಸುಂದರವಾದ ಮನೆಯನ್ನು ಕಟ್ಟಿಸುವಲ್ಲಿ ಯಶಸ್ವಿಯಾದರು. ಇದರ ಜೊತೆಗೆ ಈಗ ಆಕೆಗೊಂದು ಸಣ್ಣ ಕನಸಿದೆ. ಅದೇನಂದ್ರೆ, ದಿಬ್ರುಗಢದಲ್ಲಿ ಕೇಕ್ ಮತ್ತು ಪೇಸ್ಟ್ರಿಗಳಿಗಾಗಿಯೇ ವಿಶೇಷವಾದ ಸ್ವಂತ ಬೇಕರಿಯೊಂದನ್ನು ತೆರೆಯಬೇಕೆಂಬುದು. ಅದಕ್ಕಾಗಿ ಅವರು ಈಗಿನಿಂದಲೇ ಹಣವನ್ನು ಕೂಡಿಡುತ್ತಿದ್ದಾಳೆ.
“ನಾನು ಡೆಲಿವರಿ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದೇ ಅದರಲ್ಲಿದ್ದ ಸ್ವಾತಂತ್ರ್ಯಕ್ಕಾಗಿ. ಯಾವಾಗ ಕೆಲಸ ಮಾಡಬೇಕು, ಯಾವಾಗ ರಜೆ ಬೇಕು ಎಂದು ನಾನೇ ನಿರ್ಧರಿಸುತ್ತೇನೆ. ನನಗೆ ನಾನೇ ಬಾಸ್. ಈ ಸ್ವಾತಂತ್ರ್ಯ ನನಗೆ ತುಂಬಾ ಮುಖ್ಯ,” ಎಂದು ಹೆಮ್ಮೆಯಿಂದ ಹೇಳುವ ಬೊನಿತಾ, ಕುಟುಂಬಕ್ಕೆ ಅಗತ್ಯವಿದ್ದಾಗ ಅವರ ಜೊತೆ ನಿಲ್ಲುವುದರ ಜೊತೆ ಬಿಡುವಿನ ಸಮಯದಲ್ಲಿ ತನ್ನ ಬೇಕಿಂಗ್ ಕೌಶಲ್ಯಗಳನ್ನು ಸುಧಾರಿಸಿಕೊಳ್ಳುತ್ತಿದ್ದಾರೆ.
ಬಾಲ್ಯದ ನೆನಪು, ಕರಗಿದ ಮನಸ್ಸು
ಬೊನಿತಾ ಅನುಭವಿಸುತ್ತಿದ್ದ ಇದೇ ಸ್ವಾತಂತ್ರ್ಯವು, ಕಷ್ಟದಲ್ಲಿದ್ದ ಸಮಾಜದ ನೆರವಿಗೆ ನಿಲ್ಲಲು ಆಕೆಗೆ ದೊಡ್ಡ ಅವಕಾಶ ಮಾಡಿಕೊಟ್ಟಿತು. ನದಿ ತೀರದಲ್ಲಿಯೇ ಬೆಳೆದ ಬೊನಿತಾ ಕುಟುಂಬ, 2013 ಮತ್ತು 2015ರ ನಡುವೆ ಭೀಕರ ಪ್ರವಾಹದ ಕಷ್ಟಗಳನ್ನು ಉಂಡಿತ್ತು.
ಇತ್ತೀಚೆಗೆ ಅಸ್ಸಾಂನಲ್ಲಿ ಮತ್ತೆ ಪ್ರವಾಹ ಬಂದಾಗ, ಅವರ ಹೊಸ ಮನೆ ಎತ್ತರದ ಪ್ರದೇಶದಲ್ಲಿದ್ದ ಕಾರಣ ಸುರಕ್ಷಿತವಾಗಿತ್ತು. ಆದರೆ, ತಾವು ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳನ್ನೇ ಈಗ ಇತರ ಕುಟುಂಬಗಳು ಅನುಭವಿಸುತ್ತಿರುವುದನ್ನು ಕಂಡು ಆಕೆಯ ಮನಸ್ಸು ಮರುಗಿತು. ಕೇವಲ ಮೂಕಪ್ರೇಕ್ಷಕಿಯಾಗಿರಲು ಅವರ ಆತ್ಮಸಾಕ್ಷಿ ಒಪ್ಪಲಿಲ್ಲ.
ತಕ್ಷಣವೇ ಕಾರ್ಯಪ್ರವೃತ್ತಳಾದ ಬೊನಿತಾ, ತನ್ನ ಜೊತೆ ಕೆಲಸ ಮಾಡುವ ಇತರ ಡೆಲಿವರಿ ಪಾರ್ಟ್ನರ್ಗಳಿಂದ ಹಣ ಸಂಗ್ರಹಿಸಲು ಶುರುಮಾಡಿದ್ರು. ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಲಿ ಎಂಬ ಉದ್ದೇಶದಿಂದ ಕೇವಲ 50 ರೂ.ಗಳ ಕನಿಷ್ಠ ಮೊತ್ತವನ್ನು ನಿಗದಿಪಡಿಸಿದ್ರು.
ಇದು ಸಣ್ಣ ಮಟ್ಟದಲ್ಲಿ, ವೈಯಕ್ತಿಕವಾಗಿ ಶುರುವಾದ ಪ್ರಯತ್ನವಾದರೂ ನೋಡನೋಡುತ್ತಿದ್ದಂತೆ ದೊಡ್ಡ ಅಭಿಯಾನವಾಗಿ ಬದಲಾಯಿತು. ಇವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಇನ್ಸ್ಟಾಮಾರ್ಟ್ ಸಂಸ್ಥೆ ಕೂಡ, ಅವರು ಸಂಗ್ರಹಿಸಿದ ನಿಧಿಗೆ ತನ್ನ ಕಡೆಯಿಂದ ಮತ್ತಷ್ಟು ಹಣವನ್ನು ಸೇರಿಸಿತು.
ಶಿವಸಾಗರದ ಹಳ್ಳಿಗಳಲ್ಲಿ ಮೂಡಿದ ಮಂದಹಾಸ
ಈ ಹಣವನ್ನು ಬಳಸಿಕೊಂಡು ಬೊನಿತಾ ಮತ್ತು ಆಕೆಯ ತಂಡ ಸ್ಥಳೀಯ ಎನ್ಜಿಒ ಒಂದರ ಜೊತೆಗೂಡಿತು. ಅಕ್ಕಿ, ಬೇಳೆ, ಹಾಲು, ಅಡುಗೆ ಎಣ್ಣೆ ಮತ್ತು ತರಕಾರಿಗಳಂತಹ ಅಗತ್ಯ ದಿನಸಿ ವಸ್ತುಗಳನ್ನು ಖರೀದಿಸಿ, ಶಿವಸಾಗರ ಜಿಲ್ಲೆಯಾದ್ಯಂತ ಪ್ರವಾಹಕ್ಕೆ ತುತ್ತಾದ ಹಳ್ಳಿಗಳ 500ಕ್ಕೂ ಹೆಚ್ಚು ಕುಟುಂಬಗಳಿಗೆ ನೇರವಾಗಿ ಪರಿಹಾರ ಕಿಟ್ಗಳನ್ನು ವಿತರಿಸಿದರು.
“ನಾನು ಕೂಡ ಪ್ರವಾಹದ ಕಷ್ಟಗಳನ್ನು ಅನುಭವಿಸಿದ್ದೇನೆ. ಹಾಗಾಗಿ ಆ ಕುಟುಂಬಗಳು ಅನುಭವಿಸುತ್ತಿರುವ ನೋವು ನನಗೆ ಅರ್ಥವಾಗುತ್ತದೆ. ಇಷ್ಟೊಂದು ಜನ ಕಷ್ಟಪಡುತ್ತಿರುವಾಗ ನಾನು ಸುಮ್ಮನೆ ನಿಲ್ಲಲು ಸಾಧ್ಯವಾಗಲಿಲ್ಲ. ನಾನೊಬ್ಬಳು ಸಾಮಾನ್ಯ ಡೆಲಿವರಿ ಪಾರ್ಟ್ನರ್ ಆಗಿರಬಹುದು, ಆದರೆ ನಾವೆಲ್ಲರೂ ಒಟ್ಟಾಗಿ ಸೇರಿದರೆ ಸಮಾಜದಲ್ಲಿ ಖಂಡಿತಾ ದೊಡ್ಡ ಬದಲಾವಣೆ ತರಬಹುದು,” ಎಂದು ಬೊನಿತಾ ಹೇಳುವಾಗ ಆಕೆಯ ಕಣ್ಣುಗಳಲ್ಲಿ ಸಾರ್ಥಕತೆಯ ಭಾವವಿತ್ತು.
ಬೊನಿತಾ ದಾಸ್ ಅವರ ಈ ಕಥೆ ಓರ್ವ ಹೆಣ್ಣು ತನ್ನ ನಿರ್ಧಾರಗಳ ಮೂಲಕ ಸುತ್ತಮುತ್ತಲಿನ ಜನರ ಬದುಕಿನಲ್ಲಿ ಹೇಗೆ ಅರ್ಥಪೂರ್ಣ ಬದಲಾವಣೆ ತರಬಹುದು ಎಂಬುದಕ್ಕೆ ಒಂದು ದೊಡ್ಡ ಉದಾಹರಣೆಯಾಗಿದೆ. ಅಷ್ಟೇ ಅಲ್ಲ ಬೊನಿತಾ ಇಂದು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.








