ಕೆಎಂಸಿ ಆಸ್ಪತ್ರೆಯಲ್ಲಿ ನಿತ್ಯಪೂಜೆಯಲ್ಲಿ ನಿರತರಾಗಿರುವ ಪುತ್ತಿಗೆ ಶ್ರೀ
ಉಡುಪಿ, ಜುಲೈ 24: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುತ್ತಿಗೆ ಮಠ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಚಿಕಿತ್ಸೆಯ ನಡುವೆಯೂ ಪ್ರತಿದಿನ ನಿರಂತರ ಪೂಜೆ, ಅನುಷ್ಠಾನದಲ್ಲಿ ನಿರತರಾಗಿದ್ದಾರೆ. ಸ್ವಾಮೀಜಿ ಪೂಜೆ ಜಪ ಅನುಷ್ಠಾನಗಳಲ್ಲಿ ತೊಡಗಿರುವ ಫೋಟೋಗಳನ್ನು ನೋಡಿ ಭಕ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸ್ವಾಮೀಜಿಯವರು ಉಡುಪಿಯಲ್ಲಿ ಚಾತುರ್ಮಾಸ್ಯ ವೃತ ಕೈಗೊಂಡಿದ್ದ ಸಂದರ್ಭದಲ್ಲಿ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ನಂತರ ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫೋಟೋದಲ್ಲಿ ಪಿಪಿಇ ಕಿಟ್ ಧರಿಸಿಕೊಂಡು ಶ್ರೀಗಳ ಶಿಷ್ಯವೃಂದ ಸ್ವಾಮೀಜಿಯ ಪೂಜೆಗೆ ಸಹಕರಿಸುತ್ತಿರುವುದು ಕಾಣಬಹುದಾಗಿದೆ. ಶ್ರೀಗಳು ಆರೋಗ್ಯ ಚೆನ್ನಾಗಿದ್ದು, ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಒಂದು ವಾರಗಳ ಕಾಲ ಅವರು ಆಸ್ಪತ್ರೆಯಲ್ಲಿ ಇರಬೇಕಾಗಬಹುದು. ಭಕ್ತರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಕೆಎಂಸಿ ವೈದ್ಯರು ತಿಳಿಸಿದ್ದಾರೆ. ಕೊರೋನಾ ಬಗ್ಗೆ ಚಿಂತಿತರಾಗದೇ ಮಾನಸಿಕವಾಗಿ ನೆಮ್ಮದಿಯಿಂದ ಇರುವುದು ಕೂಡ ಅತೀ ಮುಖ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.







