ಎಂಎಸ್‍ಡಿ ಅಂದ್ರೆ ಈಗ ಧೋನಿಯಲ್ಲ.. ಮೆಂಟೇನ್ ಸೋಷಿಯಲ್ ಡಿಸ್ಟೇನ್ಸ್ ..ಇದು ಕೋವಿಡ್-19 ಸೂತ್ರ..!
ಮಹೇಂದ್ರ ಸಿಂಗ್ ಧೋನಿ… ಅಂದ್ರೆ ಎಂಎಸ್‍ಡಿ… ಈ ಹೆಸರು ವಿಶ್ವ ಕ್ರಿಕೆಟ್ ನಲ್ಲಿ ಚಿರಪರಿಚಿತ. ಕೋಟ್ಯಂತರ ಅಭಿಮಾನಿಗಳ ಕಣ್ಮನಿಯ ಹೆಸರು. ಈ ಹೆಸರಿನ ಮುಂದೆ ಒಂಥರಾ ಸೂಜಿಗಲ್ಲಿನ ಸೆಳೆತವಿದೆ. ಕಳೆದ ಒಂದು ವರ್ಷದಿಂದ ಧೋನಿ ಕ್ರಿಕೆಟ್ ಆಡುತ್ತಿಲ್ಲ. ಆದ್ರೆ ಎಂಎಸ್‍ಡಿ ಮಾತ್ರ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕಳೆದ ನಾಲ್ಕೈದು ತಿಂಗಳಿಂದ ಧೋನಿ ಮನೆಯಲ್ಲೇ ಇದ್ದಾರೆ. ರಾಂಚಿಯ ತನ್ನ ಫಾರ್ಮ್ ಹೌಸ್ ನಲ್ಲಿ ಪಕ್ಕಾ ರೈತನಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಟೈಮ್ ನಲ್ಲಿ ಎಲ್ಲ ಕ್ರಿಕೆಟಿಗರಂತೆ ಧೋನಿ ಸಾಮಾಜಿಕ ಜಾಲ ತಾಣದಲ್ಲಿ ಕಾಲ ಕಳೆಯಲಿಲ್ಲ. ಬದಲಾಗಿ ತನ್ನ ತೋಟದಲ್ಲಿ ಸಾವಯವ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಧೋನಿ ಸೈಲೆಂಟಾಗಿದ್ರೂ ಇತ್ತ ದಕ್ಷಿಣ ಭಾರತದ ತಮಿಳುನಾಡಿನ ತಿರುಪ್ಪುರ್ ಪೊಲೀಸರು ಧೋನಿಯ ಹೆಸರಿಗೆ ಮತ್ತಷ್ಟು ರಂಗು ಮೂಡಿಸಿದ್ದಾರೆ. ಕೊರೊನಾ ಸಾಂಕ್ರಮಿಕ ರೋಗಕ್ಕೆ ತಮಿಳುನಾಡು ಜರ್ಜರಿತಗೊಂಡಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ತಿರುಪ್ಪುರ್ ಪೊಲೀಸರು ಹೊಸ ಸೂತ್ರ ಕಂಡು ಹಿಡಿದಿದ್ದಾರೆ. ಅದಕ್ಕಾಗಿ ಅವರು ಧೋನಿಯ ಎಂಎಸ್‍ಡಿ ಹೆಸರನ್ನಿಟ್ಟಿದ್ದಾರೆ. ಇಲ್ಲಿ ಎಮ್‍ಎಸ್‍ಡಿ ಅಂದ್ರೆ ಧೋನಿಯ ಬದಲಾಗಿ ಮೆಂಟೇನ್ ಸೋಷಿಯಲ್ ಡಿಸ್ಟೇನ್ಸ್ ಅಂತ ಅರ್ಥ ಬರುತ್ತದೆ.
ಮೊದಲೇ ತಮಿಳುನಾಡಿಗೆ ಧೋನಿ ಅಂದ್ರೆ ಥಾಲಾ ಆಗಿದ್ದಾರೆ. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಧೋನಿ ತಮಿಳುನಾಡಿನ ಕ್ರಿಕೆಟ್ ಅಭಿಮಾನಿಗಳ ಪಾಲಿನ ನೆಚ್ಚಿನ ಹೀರೋ. ಧೋನಿ ಅಂದ್ರೆ ಸಿಎಸ್‍ಕೆ.. ಸಿಎಸ್‍ಕೆ ಅಂದ್ರೆ ಧೋನಿ ಎಂಬಂತಿದೆ ತಮಿಳುನಾಡಿನಲ್ಲಿ ಧೋನಿಯ ಹವಾ. ತಂಡದ ಸಾರಥಿಯಾಗಿ, ಅನೇಕ ರೋಚಕ ಗೆಲುವಿಗೆ ಕಾರಣರಾಗಿದ್ದ ಧೋನಿ ತಮಿಳುನಾಡಿನಲ್ಲಿ ಮನೆ ಮನೆ ಮಾತಾಗಿದ್ದಾರೆ.
ಹಾಗಂತ ಜನರಲ್ಲಿ ಜಾಗೃತಿ ಮೂಡಿಸಲು ಕ್ರಿಕೆಟಿಗರ ಮತ್ತು ಸೆಲೆಬ್ರಿಟಿಗಳ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಇದೇನೂ ಹೊಸತಲ್ಲ. ರಾಹುಲ್ ದ್ರಾವಿಡ್, ಜಸ್ಪ್ರಿತ್ ಬೂಮ್ರಾ ಅವರ ಹೆಸರುಗಳು ಕೂಡ ಬಳಕೆಯಾಗಿದೆ. ಆದ್ರೆ ಜಸ್ಪ್ರಿತ್ ಬೂಮ್ರಾ ಅವರ ಹೆಸರು ಬಳಕೆ ಮಾಡಿದಾಗ ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ರಾಜಸ್ತಾನ ಪೊಲೀಸರು ಪಂದ್ಯವೊಂದರಲ್ಲಿ ಬೂಮ್ರಾ ಹಾಕಿದ್ದ ನೋಬಾಲ್ ಎಸೆತವನ್ನು ಬಳಸಿಕೊಂಡು ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಸೋಲು ಖಚಿತ ಎಂದು ಪ್ರಚಾರ ಮಾಡಿದ್ದರು. ಆದ್ರೆ ಇದು ಟೀಕೆಗೆ ಗುರಿಯಾಗಿತ್ತು.
ಇದೀಗ ಧೋನಿಯ ಎಮ್‍ಎಸ್‍ಡಿ ಹೆಸರು ಬಳಕೆ ಮಾಡಿಕೊಂಡು ತಿರುಪ್ಪುರ್ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾ ವೈರಸ್ ನಿಯಂತ್ರಣ ಮಾಡಿ ಎಂಬ ಉದ್ದೇಶದೊಂದಿಗೆ ಎಂಎಸ್‍ಡಿ ಪದವನ್ನು ಬಳಕೆ ಮಾಡಲಾಗುತ್ತಿದೆ.








