ಒಂದು ಕಪ್ ಚಹಾದೊಂದಿಗೆ 10ಜನಪಥ್ ನಲ್ಲಿ ಮಾತುಕತೆ ನಡೆದರೆ ರಾಜಸ್ಥಾನ ಬಿಕ್ಕಟ್ಟು ಬಗೆಹರಿಯುವುದು – ಮಾರ್ಗರೇಟ್ ಆಳ್ವಾ
ಹೊಸದಿಲ್ಲಿ, ಜುಲೈ 26: ನವದೆಹಲಿಯ 10 ಜನಪಥ್ ನಲ್ಲಿ ಚಹಾ ಕಪ್ ನೊಂದಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಮಾತುಕತೆ ನಡೆದರೆ, ಚಹಾ ಖಾಲಿಯಾಗುವುದರ ಒಳಗೆ ಭಿನ್ನಾಭಿಪ್ರಾಯ ಕೂಡ ಬಗೆಹರಿಯಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ರಾಜಸ್ಥಾನದ ಗವರ್ನರ್ ಮಾರ್ಗರೇಟ್ ಅಳ್ವಾ ಅಭಿಪ್ರಾಯಪಟ್ಟಿದ್ದಾರೆ. ಜನಪಥ್ ನವದೆಹಲಿಯ ಸೋನಿಯಾ ಗಾಂಧಿಯವರ ಅಧಿಕೃತ ನಿವಾಸವಾಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇರವಾಗಿ ಪರಿಸ್ಥಿತಿಯಲ್ಲಿ ಮಧ್ಯಪ್ರವೇಶಿಸಿ ಎರಡೂ ಕಡೆಯ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯುಸಿ) ತುರ್ತಾಗಿ ಪುನರುಜ್ಜೀವನಗೊಳಿಸುವ ಮತ್ತು ಪಕ್ಷದ ನಾಯಕತ್ವದಲ್ಲಿ ಯುವ ಪೀಳಿಗೆಯನ್ನು ಮುಂದೆ ತರುವ ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ. ಮಾಧ್ಯಮವೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾರ್ಗರೇಟ್ ಅಳ್ವಾ ರಾಜಸ್ಥಾನ್ ರಾಜಕೀಯ ಬಿಕ್ಕಟ್ಟು ಪಕ್ಷದೊಳಗಿನ ಅಂತರಿಕ ವಿಚಾರ. ಕಾಂಗ್ರೆಸ್ ಅಧ್ಯಕ್ಷರು ಇದನ್ನು ಬಗೆಹರಿಸಬೇಕು. ಸೋನಿಯಾ ಗಾಂಧಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರನ್ನು 10 ಜನಪಥ್ ಗೆ ಆಹ್ವಾನಿಸಿ, ಅವರನ್ನು ಮುಖಾಮುಖಿಯಾಗಿ ಕುಳಿತು ಮಾತನಾಡಿದರೆ, ಚಹಾ ಕಪ್ ಖಾಲಿಯಾಗುವುದರ ಒಳಗೆ ಭಿನ್ನಾಭಿಪ್ರಾಯ ಕೂಡ ಬಗೆಹರಿಸುತ್ತದೆ ಎಂದು ಹೇಳಿದರು.








