ಬೆಂಗಳೂರು : ಕೋವಿಡ್ ಸೋಂಕು ಕಾರಣ ಮುಂದಿಟ್ಟು 7ನೇ ತರಗತಿ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಪಠ್ಯವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಟಿಪ್ಪು ಜಯಂತಿ ಆಚರಣೆ ಮಾಡುವುದು, ಬಿಡುವುದು ಅವರಿಗೆ ಸೇರಿದ್ದು. ಆದರೆ ಪಠ್ಯಕ್ರಮದಿಂದ ಕೈಬಿಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಪಠ್ಯವನ್ನು ಪಠ್ಯಕ್ರಮದಿಂದ ಕೈಬಿಡದಂತೆ ಹಿಂದೆಯೂ ಒತ್ತಡ ಹೇರಿದ್ದೆವು. ಆದ್ರೆ ಬಿಜೆಪಿಯವರು ತಮ್ಮ ಅಜೆಂಡಾ ಈಡೇರಿಸಿಕೊಳ್ಳಲು ಹೀಗೆ ಮಾಡಿದ್ದಾರೆ. ಪಠ್ಯದಿಂದ ಟಿಪ್ಪು ಪಾಠ ಕೈಬಿಟ್ಟಿದ್ದಾರೆ, ಆದರೆ ಟಿಪ್ಪು ಇತಿಹಾಸ ತಿರುಚಲು ಸಾಧ್ಯವಿಲ್ಲ ಎಂದು ಗರಂ ಆದರು.
ಟಿಪ್ಪು ಸುಲ್ತಾನ್, ಹೈದರಾಲಿ ಹೋರಾಟ ಮಾಡಿದ ಬಗ್ಗೆ ಬ್ರಿಟಿಷರ ಬಳಿಯೇ ದಾಖಲೆಗಳಿವೆ. ಇದು ಬಿಜೆಪಿಯವರಿಗೂ ಗೊತ್ತಿದೆ. ಆದರೂ ಟಿಪ್ಪು ಸುಲ್ತಾನ್ ಪಠ್ಯವನ್ನು ಕೈ ಬಿಟ್ಟಿದ್ದು, ಸರಿಯಲ್ಲ. ಈ ವಿಚಾರವಾಗಿ ಕೆಪಿಸಿಸಿಯಿಂದ ಅಧ್ಯಯನ ಕಮಿಟಿ ರಚನೆ ಮಾಡ್ತೇವೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡ್ತೇವೆ. ನಾವು ಎಲ್ಲವನ್ನೂ ಸಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.








