ರಾಮ, ಸೀತಾ ಮತ್ತು ಲಕ್ಷ್ಮಣರಿರುವ ಸಂವಿಧಾನದ ಮೂಲ ದಾಖಲೆಯ ಫೋಟೋವನ್ನು ಹಂಚಿಕೊಂಡ ಕಾನೂನು ಸಚಿವ
ಹೊಸದಿಲ್ಲಿ, ಅಗಸ್ಟ್ 6: ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆ ಸಮಾರಂಭದ ಸಂದರ್ಭದಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಸಂವಿಧಾನದ ಮೂಲ ದಾಖಲೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಭಗವಾನ್ ರಾಮ, ಸೀತಾ ಮತ್ತು ಲಕ್ಷ್ಮಣರು ಅಯೋಧ್ಯೆಗೆ ಹಿಂದಿರುಗುವ ರಾಮಾಯಣ ಕಥೆಯನ್ನು ವಿವರಿಸುವ ರೇಖಾಚಿತ್ರವಿದೆ.

ಭಾರತದ ಸಂವಿಧಾನದ ಮೂಲ ದಾಖಲೆಯಲ್ಲಿ ಭಗವಾನ್ ರಾಮ, ಮಾತಾ ಸೀತಾ ಮತ್ತು ಲಕ್ಷ್ಮಣರು ರಾವಣನನ್ನು ಸೋಲಿಸಿದ ನಂತರ ಅಯೋಧ್ಯೆಗೆ ಮರಳುವ ಸುಂದರವಾದ ರೇಖಾಚಿತ್ರ ಇದೆ. ಇದು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಅಧ್ಯಾಯದ ಆರಂಭದಲ್ಲಿ ಲಭ್ಯವಿದೆ. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ನಾನು ಭಾವಿಸಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಇದು ಒಂದು ಐತಿಹಾಸಿಕ ದಿನ. ತಲೆಮಾರುಗಳ ತ್ಯಾಗ, ಕಾಯುವಿಕೆ ಮತ್ತು ತಾಳ್ಮೆಯ ನಂತರ ಇಂದು ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಪ್ರಾರಂಭವಾಗಿದೆ. ಭಾರತೀಯರು ಮತ್ತು ಪ್ರಪಂಚದಾದ್ಯಂತದ ಅನೇಕ ಜನರು ಶತಮಾನಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದರು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಇವರು ಈ ಹಿಂದೆ ನ್ಯಾಯಾಲಯದಲ್ಲಿ
ಅಯೋಧ್ಯೆ ಶೀರ್ಷಿಕೆ ಮೊಕದ್ದಮೆ ವಿವಾದದಲ್ಲಿ ರಾಮಮಂದಿರ ಪರವಾಗಿ ಪ್ರತಿನಿಧಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ, ಪ್ರಖ್ಯಾತ ವಕೀಲ ಕೆ ಪರಾಸರನ್ ಅವರು ಕೇಸನ್ನು ಮುನ್ನಡೆಸಿದರು. ಆ ಸಮಯದಲ್ಲಿ ಪ್ರಸಾದ್ ಕೇಂದ್ರ ಕಾನೂನು ಸಚಿವರಾಗಿದ್ದರು.








