ಇಂಗ್ಲೆಂಡ್ ಕ್ರಿಕೆಟ್ ತಂಡದ ಭಾರತ ಪ್ರವಾಸ ರದ್ದು…!
2020ರ ಐಪಿಎಲ್ ಟೂರ್ನಿ ಮತ್ತು ಕೋವಿಡ್ ಸೋಂಕಿನಿಂದಾಗಿ ಇಂಗ್ಲೆಂಡ್ ತಂಡದ ಭಾರತ ಪ್ರವಾಸ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಈ ಹಿಂದೆ ನಿಗದಿಯಾಗಿದ್ದಂತೆ ಇಂಗ್ಲೆಂಡ್ ತಂಡ ಸೆಪ್ಟಂಬರ್ ನಲ್ಲಿ ಭಾರತ ಪ್ರವಾಸ ಮಾಡಬೇಕಾಗಿತ್ತು. ಭಾರತದಲ್ಲಿ ಏಕದಿನ ಸರಣಿಯನ್ನು ಆಡಬೇಕಾಗಿತ್ತು. ಆದ್ರೆ ಭಾರತದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗಿರುವುದರಿಂದ ಮತ್ತು ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿರುವುದರಿಂದ ಇಂಗ್ಲೆಂಡ್ ಸರಣಿಯನ್ನು ಮುಂದೂಡಲಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಮತ್ತು ಬಿಸಿಸಿಐ ಸ್ಪಷ್ಟಪಡಿಸಿದೆ.
ಇಂಗ್ಲೆಂಡ್ ಮತ್ತು ಭಾರತ ನಡುವಿನ ಕ್ರಿಕೆಟ್ ಸರಣಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಏಕದಿನ ಸರಣಿ ಮುಂದೂಡಿರುವ ಬಗ್ಗೆ ಉಭಯ ಕ್ರಿಕೆಟ್ ಸಂಸ್ಥೆಗಳು ಚರ್ಚೆ ನಡೆಸಿವೆ. ಈ ಏಕದಿನ ಸರಣಿಯನ್ನು ಮುಂದಿನ ವರ್ಷ ನಡೆಸುವ ಬಗ್ಗೆ ಚರ್ಚೆ ಮಾಡಿವೆ. 2021ರ ಜನವರಿಯಿಂದ ಮಾರ್ಚ್ ತನಕ ಏಕದಿನ, ಟೆಸ್ಟ್ ಮತ್ತು ಟಿ-ಟ್ವೆಂಟಿ ಸರಣಿಗಳನ್ನು ನಡೆಸುವ ಬಗ್ಗೆ ಬಿಸಿಸಿಐ ಮತ್ತು ಇಸಿಬಿ ಚಿಂತನೆ ನಡೆಸುತ್ತಿವೆ.
ಒಟ್ಟಿನಲ್ಲಿ ಕೋವಿಡ್ ನಿಂದಾಗಿ ಭಾರತದಲ್ಲಿ ಈಗಾಗಲೇ ಹಲವು ಸರಣಿಗಳು ರದ್ದುಗೊಂಡಿವೆ. ಈ ಎಲ್ಲಾ ಸರಣಿಗಳಿಗೂ ಹೊಸ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕಾಗಿದೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ. ಆನಂತರ ಡಿಸೆಂಬರ್ ನಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಭಾರತ ಆಸ್ಟ್ರೇಲಿಯಾದಿಂದ ಜನವರಿ ಕೊನೆಯಲ್ಲಿ ಆಗಮಿಸಲಿದೆ. ಒಂದು ವೇಳೆ ವೇಳಾಪಟ್ಟಿ ನಿಗದಿಯಾದ್ರೆ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಭಾರತ ಮೂರು ಮಾದರಿಯ ಕ್ರಿಕೆಟ್ ಸರಣಿಗಳನ್ನು ಆಡಲಿದೆ.








