2020ರ ಐಪಿಎಲ್ ನಲ್ಲಿ ಆತ್ಮ ನಿರ್ಭರ್ ಭಾರತ ? ಪತಂಜಲಿ ಐಪಿಎಲ್ ಗೆ ಪ್ರಾಯೋಜಕತ್ವ ?
ಯೋಗ ಗುರು ಬಾಬಾ ರಾಮ್ ದೇವ್ ಈಗ ಕ್ರಿಕೆಟ್ ಜಗತ್ತಿಗೂ ಕಾಲಿಡುತ್ತಿದ್ರಾ ? ಹೀಗೊಂದು ಪ್ರಶ್ನೆ ಈಗ ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ. ಮೇಕ್ ಇನ್ ಇಂಡಿಯಾ, ವೋಕಲ್ ಫೋರ್ ಲೋಕಲ್ ಪರಿಕಲ್ಪನೆಯೊಂದಿಗೆ ದೇಸಿ ಉತ್ಪನ್ನಗಳ ಮೂಲಕ ಪತಂಜಲಿ ಸಂಸ್ಥೆಯನ್ನು ಹುಟ್ಟು ಹಾಕಿರುವ ರಾಮ್ ದೇವ್ ಭಾರತದ ಶ್ರೀಮಂತರ ಪಟ್ಟಿಯಲ್ಲೂ ಇದ್ದಾರೆ. ವರ್ಷಕ್ಕೆ 10 ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಪತಂಜಲಿ ಅತೀ ಬೇಡಿಕೆಯ ಉತ್ಪನ್ನಗಳಲ್ಲಿ ಒಂದಾಗಿದೆ. ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪತಂಜಲಿ ಹೆಸರು ರಾರಾಜಿಸುತ್ತಿದೆ.
ಇದೀಗ ಪತಂಜಲಿ 2020ನೇ ಸಾಲಿನ ಐಪಿಎಲ್ ಟೂರ್ನಿಗೆ ಪ್ರಾಯೋಜಕತ್ವ ನೀಡುವ ಬಗ್ಗೆಯೂ ಆಸಕ್ತಿ ವಹಿಸಿದೆ. ವಿವೋ ಜೊತೆಗಿನ ಒಪ್ಪಂದ ರದ್ದುಗೊಂಡ ಕಾರಣ ಬಿಸಿಸಿಐ ಹೊಸ ಪ್ರಾಯೋಜಕರನ್ನು ಹುಡುಕುತ್ತಿದೆ. ಈಗಾಗಲೇ ಕೋಕಾ ಕೋಲಾ ಮತ್ತು ಬೈಜೂಸ್ ಆನ್ ಲೈನ್ ಅಪ್ ಸಂಸ್ಥೆಗಳು ಮುಂದೆ ಬಂದಿದ್ದು, ಇವರ ಜೊತೆ ಪೈಪೋಟಿ ನಡೆಸಲು ಪತಂಜಲಿ ಸಂಸ್ಥೆಯು ಮುಂದಾಗಿದೆ.
ಆಯುರ್ವೆದ ಮೆಡಿಸಿನ್ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿರುವ ಪತಂಜಲಿ ಸಂಸ್ಥೆಯು ಐಪಿಎಲ್ ಟೂರ್ನಿಯ ಮೂಲಕ ತನ್ನ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಲು ಪ್ಲಾನ್ ಮಾಡಿಕೊಂಡಿದೆ. ಹಾಗಂತ ಈ ಬಗ್ಗೆ ಪತಂಜಲಿ ಸಂಸ್ಥೆ ಅಧಿಕೃತವಾಗಿ ಏನು ಹೇಳಿಲ್ಲ. ಇದು ವೋಕಲ್ ಫೋರ್ ಲೋಕಲ್. ಭಾರತದ ಬ್ರಾಂಡ್‍ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಗುವಂತೆ ಮಾಡಲು ಇದು ಸರಿಯಾದ ಸಮಯ. ಹೀಗಾಗಿ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಈ ಬಗ್ಗೆ ನಾವು ಅಂತಿಮ ತೀರ್ಮಾನವನ್ನು ಇನ್ನೂ ತೆಗೆದುಕೊಂಡಿಲ್ಲ ಎಂದು ಪತಂಜಲಿ ಸಂಸ್ಥೆಯ ವಕ್ತಾರ ಎಸ್.ಕೆ. ತಿಜಾರವಾಲಾ ಹೇಳಿದ್ದಾರೆ.
ಈ ಹಿಂದೆ ಬಿಸಿಸಿಐ ಐಪಿಎಲ್ ಪ್ರಾಯೋಜಕತ್ವದಲ್ಲಿ ವಿವೋ ಕಂಪೆನಿಯ ಜೊತೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. 2190 ಕೋಟಿ ರೂಪಾಯಿ ಒಪ್ಪಂದ ಪ್ರಕಾರ ಪ್ರತಿ ವರ್ಷ 440 ಕೋಟಿ ರೂಪಾಯಿಯನ್ನು ಬಿಸಿಸಿಐಗೆ ಪಾವತಿ ಮಾಡಬೇಕಾಗಿತ್ತು.
ಇನ್ನು ಪತಂಜಲಿ ಕಂಪೆನಿಗೆ ಐಪಿಎಲ್ ಪ್ರಾಯೋಜಕತ್ವ ಸಿಗುವುದು ದೊಡ್ಡ ಕಷ್ಟವೇನೂ ಇಲ್ಲ. ಹೇಗೊ ಕೇಂದ್ರದಲ್ಲಿ ಬಿಜೆಪಿ ಆಡಳಿತವಿದೆ. ಹಾಗೇ ಬಿಸಿಸಿಐ ಕಾರ್ಯದರ್ಶಿ ಕೂಡ ಗೃಹ ಸಚಿವ ಅಮೀತ್ ಶಾ ಅವರ ಮಗ ಜೈ ಶಾ. ಗಂಗೂಲಿ ಕೂಡ ಸರ್ಕಾರದ ಪರವಾಗಿಯೇ ಇದ್ದಾರೆ. ಅಧಿಕಾರ ಬಲ ಮತ್ತು ಹಣ ಬಲ ಎರಡು ಕೂಡ ಪತಂಜಲಿ ಸಂಸ್ಥೆಯ ಪರವಾಗಿಯೇ ಇದೆ. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿಯು, ಪತಂಜಲಿ ಐಪಿಎಲ್ ಟಿ-ಟ್ವೆಂಟಿಯಾದ್ರೂ ಅಚ್ಚರಿಪಡಬೇಕಾಗಿಲ್ಲ.








