ಬೆಂಗಳೂರು : ಕಾನೂನು ಮುರಿದರೆ ನಮಗೆ ಡಿಕೆ ಬರ್ತೈತೆ, ಬಂಡೆ ಬರ್ತೈತೆ ಅಂತ ಯಾರೂ ಅಂದುಕೊಳ್ಳಬೇಡಿ. ಇದು ಕಾಂಗ್ರೆಸ್ ಸರ್ಕಾರ ಅಲ್ಲ, ರಾಜಾಹುಲಿ ಸರ್ಕಾರ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಗಲಾಟೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಿಡಿಗೇಡಿಗಳನ್ನು ನಾವು ಸುಮ್ಮನೆ ಬಿಡೋದಿಲ್ಲ. ಘಟನೆಯಲ್ಲಿ ಯಾರೆಲ್ಲ ಇದ್ದಾರೋ ಅವರಿಗೆಲ್ಲ ನೋಟಿಸ್ ಕೊಡ್ತೇವೆ, ಜಮೀರ್ ಅಹಮದ್, ಸಿದ್ದರಾಮಯ್ಯ ಜೊತೆಗೆ ಮಾತನಾಡಿರುವುದು ಮಾಧ್ಯಮಗಳಲ್ಲೇ ಬಂದಿದೆ. ಮಾಜಿ ಮೇಯರ್ ಸಂಪತ್ ಹೆಸರು ಕೇಳಿ ಬಂದಿದೆ. ಅವರಿಗೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ನೋಟಿಸ್ ಕೊಡ್ತಾರೆ ಎಂದು ಹೇಳಿದರು.
ಇದೇ ವೇಳೆ ಗಲಭೆ ಕುರಿತಂತೆ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ರಚಿಸಿದೆ. ಈ ವಿಚಾರವಾಗಿ ಮಾತನಾಡಿದ ಅಶೋಕ್, ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಅದಕ್ಕೆ ಕಾಂಗ್ರೆಸ್ ನವರ ಸತ್ಯ ಶೋಧನಾ ಸಮಿತಿ ಬೇಕಾ? ಇದಕ್ಕೆಲ್ಲ ಉತ್ತರ ಕೊಡಬೇಕಾದವರು ಕಾಂಗ್ರೆಸ್ ನವರು ಎಂದು ವ್ಯಂಗ್ಯವಾಡಿದ್ದಾರೆ.
ಕಾನೂನು ಮೀರಿ ನಡೆಯುವವರನ್ನು ಸರ್ಕಾರ ಬಿಡಲ್ಲ, ಸಂವಿಧಾನ ಎಲ್ಲರಿಗೂ ಒಂದೇ, ಸಂವಿಧಾನ ದೇವರ ಹೆಸರಲ್ಲಿ ರಚನೆಯಾಗಿಲ್ಲ. ಮನೆಗೊಂದು ಕಾನೂನು, ಧರ್ಮಕ್ಕೊಂದು ಕಾನೂನು ಇಲ್ಲಿಲ್ಲ, ನಮ್ಮ ಅಧಿಕಾರಿಗಳೂ ಸಿಂಹದಮರಿಗಳ ಥರ ಇದ್ದಾರೆ. ಯಾರಾದ್ರೂ ಕಾನೂನು ಮೀರಿ ನಡೆದರೆ ಎಲ್ಲರನ್ನೂ ಹೆಡೆಮುರಿ ಕಟ್ಟಿ ಜೈಲಿಗೆ ಹಾಕ್ತೀವಿ. ದುಷ್ಟರನ್ನು ಕಾಪಾಡಿಕೊಂಡು ಕೂರುವುದಕ್ಕೆ ಇದು ಕಾಂಗ್ರೆಸ್ ಸರ್ಕಾರ ಅಲ್ಲ, ರಾಜಾಹುಲಿ ಸರ್ಕಾರ ಎಂದು ಸಚಿವರು ಗುಡುಗಿದರು.








