ಕೊಪ್ಪಳ : ಡಿಸಿಎಂ ಗೋವಿಂದ ಕಾರಜೋಳ ಅವರು ಕುಷ್ಟಗಿ ತಾಲೂಕಿನ ಹನುಮಸಾಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಕೆಲವು ತಾಲೂಕಗಳಲ್ಲಿ ಪ್ರವಾಹ ಬಂದಿದೆ. ಆಲಮಟ್ಟಿ ಡ್ಯಾಂ ನಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಹಿಡಕಲ್ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಹೀಗಾಗಿ ಜಲಾಶಯದ ಅಕ್ಕ ಪಕ್ಕದ ಜಮೀನಿಗೆ ನೀರು ನುಗ್ಗಿದೆ. ಯಾವುದೇ ಗ್ರಾಮಗಳಿಗೆ ನೀರು ನುಗ್ಗಿಲ್ಲ. ಜನ ಸುರಕ್ಷತವಾಗಿದ್ದಾರೆ. ನದಿ ದಂಡೆಯಲ್ಲಿ ಅಲ್ಪ ಪ್ರಮಾಣದ ಬೆಳೆ ಹಾನಿಯಾಗಬಹುದು ಎಂದು ತಿಳಿಸಿದರು.
ಇನ್ನು ನೀರು ಹೆಚ್ಚಾದರೆ ಜನರ ಸ್ಥಳಾಂತರ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಸತಿ ಹಾಗೂ ಊಟದ ವ್ಯವಸ್ಥೆ ಮಾಡುತ್ತೇವೆ. ಜನ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯ ಇಲ್ಲ. ನಾಲ್ಕೈದು ದಿನ ಮಳೆ ಹೆಚ್ಚಾಗುವ ಸಂಭವ ಇದೆ ಎಂದು ತಿಳಿಸಿದ ಡಿಸಿಎಂ, ಕಳೆದ ಬಾರಿ ಪರಿಹಾರದ ವಿಚಾರದಲ್ಲಿ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಕಳೆದ ವರ್ಷದ ಪರಿಹಾರ ಎಲ್ಲರಿಗೂ ನೀಡಲಾಗಿದೆ. ಈ ಬಾರಿ ಹಾನಿ ಕುರಿತು ಸಮಿಕ್ಷೆ ನಡೆಸಲಾಗುತ್ತಿದೆ ಎಂದರು.








