ನಟ ಕಿಚ್ಚ ಸುದೀಪ್ ಅವರು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಬಗ್ಗೆ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಧೋನಿ ನಿವೃತ್ತಿ ಹೊಂದಿರುವುದಕ್ಕೆ ಅತ್ಯಂತ ಭಾವುಕರಾಗಿ ಟ್ವೀಟ್ ಮಾಡಿರುವ ಕಿಚ್ಚ ಅದ್ಭುತ ಕ್ರಿಕೆಟರ್ ಜೊತೆಗೆ ಒಬ್ಬ ನಿಜವಾದ ನಾಯಕ ಇಂದು ನಿವೃತ್ತನಾಗಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ನಿವೃತ್ತಿ ಇಷ್ಟು ಹಠಾತ್ತಾಗಿ ಬರುತ್ತದೆಂದು ಊಹಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಧೋನಿ ಕೊನೆಯದಾಗಿ ಆಡಿದ ಪಂದ್ಯ ನಾವು ನೋಡಿದ್ದೇವೆ. ಆದರೆ ಅದೇ ಕೊನೆಯ ಪಂದ್ಯವೆಂದು ನಮಗೆ ಗೊತ್ತಿರಲಿಲ್ಲ. ಧೋನಿಯ ಕೊನೆಯ ಪಂದ್ಯವನ್ನು ಅಭಿಮಾನಿಗಳು ನೋಡಬೇಕಿತ್ತು ಎಂದು ತಮ್ಮ ಮಾತುಗಳಲ್ಲಿ ಸೇರಿಸಿ ಬೇಸರ ವ್ಯಕ್ತಪಡಿಸಿದ್ದಾರೆ. 
ಅಲ್ಲದೇ ಸೂಕ್ತ ‘ಸೆಂಡ್ ಆಫ್’ ಅನ್ನು ಕೊಡುವ ಅವಕಾಶವನ್ನಾದರೂ ಅಭಿಮಾನಿಗಳಿಗೆ ಧೋನಿ ಕೊಡಬೇಕಿತ್ತು. ಒಂದು ಕಡೆಯ ಪಂದ್ಯವನ್ನು ಆಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಹೇಳಿ ಕೇಳಿ ಕ್ರಿಕೆಟ್ ಅಭಿಮಾನಿ ಹಾಗೂ ಉತ್ತಮ ಕ್ರಿಕೆಟ್ ಆಟಗಾರ ಕೂಡ ಹೌದು.










