ಬಳ್ಳಾರಿ: ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ಬಳ್ಳಾರಿಯಲ್ಲಿ ತುಂಗಭದ್ರಾ ಡ್ಯಾಮ್ ಸಂಪೂರ್ಣ ಭರ್ತಿಯಾಗಿದೆ. ಪರಿಣಾಮ ಡ್ಯಾಮ್ ನಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತಿದ್ದು, ನದಿ ತೀರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. 20 ಕ್ರಸ್ಟ್ ಗೇಟ್ ಗಳ ಮೂಲಕ ಒಂದು ಲಕ್ಷದ ಹತ್ತು ಸಾವಿರ ಕ್ಯೂಸೆಕ್ ಗೂ ಅಧಿಕ ನೀರನ್ನು ನದಿಗೆ ಹರಿಸಲಾಗಿದೆ.
1633 ಅಡಿ ಎತ್ತರದ 100 ಟಿಎಂಸಿ ಸಾಮಾರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯ ಇದೀಗ ಸಂಪೂರ್ಣವಾಗಿ ಭರ್ತಿಯಾಗಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಡ್ಯಾಂನಿಂದ ನೀರು ಹೊರ ಬಿಟ್ಟ ಹಿನ್ನಲೆ ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇತ್ತ ನದಿಗೆ ಅಧಿಕ ಪ್ರಮಾಣದ ನೀರು ಹರಿಬಿಟ್ಟ ಪರಿಣಾಮ ಹಂಪಿಯ ಹಲವು ಐತಿಹಾಸಿಕ ಸ್ಮಾರಕಗಳು ಮುಳುಗಡೆಯಾಗಿವೆ. ಇನ್ನೂ ಕೆಲ ಸ್ಮಾರಕಗಳಿಗೆ ಜಲಕಂಠಕ ಎದುರಾಗಿದೆ.
ಪುರಂದರ ದಾಸರ ಮಂಟಪ, ಸಾಲುಮಂಟಪ, ಧಾರ್ಮಿಕ ವಿಧಿಗಳನ್ನು ಮಾಡುವ ಮಂಟಪಗಳು ಸೇರಿದಂತೆ ಹಲವು ಸ್ಮಾರಕ ಮುಳುಗಡೆಯಾಗಿದ್ದು, ಹಂಪಿಯಿಂದ ವಿರೂಪಾಪುಗಡ್ಡೆ ತೆರಳುವ ಬೋಟ್ ನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ಇತ್ತ ನದಿಯಲ್ಲಿ ತೆಪ್ಪ ಹಾಕದಂತೆಯೂ ಎಚ್ಚರಿಕೆ ನೀಡಲಾಗಿದೆ.