ಬೆಂಗಳೂರು : ಎಐಸಿಸಿ ಅಧ್ಯಕ್ಷರ ನೇಮಕ ವಿಚಾರವಾಗಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಈ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿ, ಈಗಲಾದರೂ ಕಾಂಗ್ರೆಸ್ ಪಕ್ಷ ವಿಸರ್ಜನೆ ಆದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಲ್ಲೇಶ್ವರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಕಾಂಗ್ರೆಸ್ ನಲ್ಲಿನ ವಿದ್ಯಮಾನ ಅವರ ಪಕ್ಷದ ಆಂತರಿಕ ವಿಚಾರ ಆದರೂ ಇಂತಹ ಪರಿಸ್ಥಿತಿ ಆ ಪಕ್ಷಕ್ಕೆ ಬರಬಾರದಿತ್ತು. ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆರಂಭಗೊಂಡಿದೆ. ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಿಂದಲೂ ಇರುವ ಪಕ್ಷ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷದ ವಿಸರ್ಜನೆಗೆ ಗಾಂಧಿಯವರೇ ಸಲಹೆ ಕೊಟ್ಟಿದ್ದರು. ಇದು ಸ್ವಾತಂತ್ರ್ಯಕ್ಕಾಗಿ ಮಾಡಿದ ಒಂದು ಸಂಸ್ಥೆ ಆಗಿತ್ತು. ಆದರೆ ಆಗ ವಿಸರ್ಜನೆ ಆಗಲಿಲ್ಲ. ಈಗಲಾದರೂ ಕಾಂಗ್ರೆಸ್ ಪಕ್ಷ ವಿಸರ್ಜನೆ ಆದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಈಗಲಾದರೂ ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ, ಪ್ರಶ್ನೆ ಮಾಡೋ ಪರಿಸ್ಥಿತಿ ಬಂದಿರೋದು ಸಂತೋಷ ಎಂದ ಡಿಸಿಎಂ, ಹಿಂದೆ ಎಲ್ಲರೂ ಬಾಯಿ ಮುಚ್ಕೊಂಡು ಸಹಿಸಿಕೊಂಡು ಹೋಗೋ ವಾತಾವರಣ ಇತ್ತು ಎಂದು ವ್ಯಂಗ್ಯವಾಡಿದರು.









