ಬೆಂಗಳೂರು: ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ಪ್ರಾರಂಭ ವಿಚಾರವಾಗಿ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ನಿಖಿಲ್, ಮೋದಿಯವರ #VocalForLocal ಗೆ ಬಲ ನೀಡಲು ಭಾರತದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರನ್ನು ಕೊಪ್ಪಳದಲ್ಲಿ ಪ್ರಾರಂಭಿಸುತ್ತಿರುವುದಾಗಿ ಇತ್ತೀಚೆಗೆ ಸಿಎಂ ಅವರು ಹೇಳಿಕೊಂಡಿದ್ದಾರೆ. ಭಾರತವನ್ನು ಆಟಿಕೆ ಉತ್ಪಾದನೆಯ ಕೇಂದ್ರಬಿಂದುವನ್ನಾಗಿ ಮಾಡಲು ನೀಡಿದ್ದ ಕರೆಗೆ ಓಗೊಟ್ಟು ಮಾಡಿರುವ ಕೆಲಸವೆಂಬಂತೆ ಪ್ರಧಾನಿಗಳು ಇದನ್ನು ಹೇಳಿಕೊಂಡಿದ್ದಾರೆ.
ಆದರೆ ಇದು ವಾಸ್ತವವನ್ನು ಮರೆಮಾಚುವ ಕೆಲಸ ಎಂದು ನನ್ನ ಭಾವನೆ. ವಾಸ್ತವವೇನೆಂದರೆ 2018ರಲ್ಲಿ ಕುಮಾರಣ್ಣನವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕನಸಿನ ಕೂಸಾಗಿದ್ದ ‘ಕಾಂಪೀಟ್ ವಿತ್ ಚೀನಾ’ ಪರಿಕಲ್ಪನೆಯಡಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲು 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಯಿತು.
2019 ರಲ್ಲಿ 2000 ಕೋಟಿ ರೂ. ಅನುದಾನ ಒದಗಿಸಲು ನಿರ್ಧರಿಸಲಾಗಿತ್ತು. ಉತ್ಪಾದನಾ ವಲಯವನ್ನು ಉತ್ತೇಜಿಸಲು ಸ್ಥಳೀಯ ಸಂಪನ್ಮೂಲಗಳ ಬಳಕೆ, 9 ಜಿಲ್ಲೆಗಳಲ್ಲಿ ಕನಿಷ್ಠ 9 ಲಕ್ಷ ಸ್ಥಳೀಯರಿಗೆ ಉದ್ಯೋಗಾವಕಾಶ ಮತ್ತು ಅಸಮತೋಲನ ನಿವಾರಿಸುವ ಸಲುವಾಗಿ ಈ ಯೋಜನೆ ಜಾರಿಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಆಟಿಕೆ, ಕಲಬುರಗಿಯಲ್ಲಿ ಸೋಲಾರ್ ವಿದ್ಯುತ್ ಉಪಕರಣ, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿಭಾಗಗಳ ತಯಾರಿಕೆ, ತುಮಕೂರಿನಲ್ಲಿ ಸ್ಪೋಟ್ರ್ಸ್ ಮತ್ತು ಫಿಟ್ನೆಸ್ ಉಪಕರಣ ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ನೀಡಲು ಮೈತ್ರಿ ಸರ್ಕಾರ ಮುಂದಾಗಿತ್ತು.
ಇದರ ಭಾಗವಾಗಿ ಪ್ರಾರಂಭವಾಗುತ್ತಿರುವ ಕೊಪ್ಪಳ ಆಟಿಕೆ ತಯಾರಿಕಾ ಕ್ಲಸ್ಟರ್ ಪ್ರಾರಂಭವಾಗುತ್ತಿದೆ. ಅಲ್ಲಿನ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಉದ್ಯೋಗಕ್ಕಾಗಿ ಕೊಪ್ಪಳದ ಯುವ ಜನತೆ ಬೆಂಗಳೂರನ್ನು ಅವಲಂಬಿಸುವುದು ಕಡಿಮೆಯಾಗಲಿ. ಈ ಮೂಲಕ ತಮ್ಮ ಮಾತೃ ಜಿಲ್ಲೆಗಳಲ್ಲೇ ಯುವಕರಿಗೆ ಕೆಲಸ ಸಿಗುವಂತಾಗಲಿ ಎಂದು ಆಶಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.








