ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಈಗ ರೋಚಕ ತಿರುವು ಬಂದಿದೆ. ಇದೇ ಮೊದಲ ಬಾರಿಗೆ ಡ್ರಗ್ಸ್ ಜಾಲದಲ್ಲಿ ಲಿಂಕ್ ಹೊಂದಿದ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ತುಪ್ಪದ ಬೆಡಗಿ ಖ್ಯಾತಿಯ ನಟಿ ರಾಗಿಣಿ ದ್ವಿವೇದಿಗೆ ನೋಟಿಸ್ ನೀಡಿದ್ದಾರೆ.
ನಾಳೆ ಬೆಳಿಗ್ಗೆ 10 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರಾಗುವಂತೆ ನೋಟಿಸ್ನಲ್ಲಿ ರಾಗಿಣಿಗೆ ಸೂಚನೆ ನೀಡಲಾಗಿದೆ. ನಾಳೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.
ರಾಗಿಣಿಗೆ ನೋಟಿಸ್ ನೀಡುವ ಮುನ್ನ ಸಿಸಿಬಿ ಪೊಲೀಸರು ಜಯನಗರ ಆರ್ಟಿಒ ಅಧಿಕಾರಿ ರವಿಶಂಕರ್ ವಿಚಾರಣೆ ನಡೆಸಿದ್ದರು. ರವಿಶಂಕರ್ ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಆಧಾರದ ಮೇರೆಗೆ ರಾಗಿಣಿಗೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
ಇನ್ನೂ ಮೂವರಿಗೆ ಸಿಸಿಬಿ ನೋಟಿಸ್..?
ಸದ್ಯ ನಟಿ ರಾಗಿಣಿ ದ್ವಿವೇದಿ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಡ್ರಗ್ಸ್ ದಂಧೆಕೋರರೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಸ್ಯಾಂಡಲ್ವುಡ್ನ ಮತ್ತೆ ಮೂವರಿಗೆ ನೋಟಿಸ್ ನೀಡಲು ಸಿಸಿಬಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಡ್ರಗ್ಸ್ ಮಾಫಿಯಾ ಪ್ರಕರಣವನ್ನು ಸಿಸಿಬಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿರುವುದು ರಾಗಿಣಿಗೆ ನೋಟಿಸ್ ನೀಡಿರುವುದರಿಂದ ಸ್ಪಷ್ಟವಾಗಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಅಲರ್ಟ್ ಆಗಿದ್ದಾರೆ.








