ಬಣ್ಣಗಳ ಹಬ್ಬ ಹೋಳಿಯಲ್ಲಿ ಕರಾವಳಿಯ ಮರಾಠಿ ನಾಯಕ ಮತ್ತು ಕುಡುಬಿ ಜನಾಂಗಗಳು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ಕರಾವಳಿಗೆ ಹಲವು ಜಾತಿ, ಜನಾಂಗದವರು ವಲಸೆ ಬಂದಿದ್ದು ತಮ್ಮ ತಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನು ಪಾಲಿಸಿದ್ದಾರೆ. ಹೀಗಾಗಿ ಕರಾವಳಿಯಲ್ಲಿ ವಿಭಿನ್ನ ಆರಾಧನೆ, ಆಚರಣೆಗಳ ನೆಲೆಯೂರಿದೆ. ಉತ್ತರ ಭಾರತದಲ್ಲಿ ಬಣ್ಣಗಳನ್ನು ಎರಚಿ ಹೋಳಿ ಹಬ್ಬವನ್ನು ಆಚರಿಸಿದರೆ ಕರಾವಳಿಯಲ್ಲಿ ಮರಾಠಿ ನಾಯಕ ಸಮುದಾಯಕ್ಕೆ ಸೇರಿದ ಜನರು ಬಗೆಬಗೆಯ ಬಣ್ಣದ ಬಟ್ಟೆಗಳನ್ನು ತೊಟ್ಟು ಮನಬಿಚ್ಚಿ ಕುಣಿಯುತ್ತ ಹೋಳಿ ಆಚರಿಸುತ್ತಾರೆ.

ಹೋಳಿಯ ಹುಣ್ಣಿಮೆಯ ಕೆಲ ದಿನಗಳ ಮೊದಲು ಈ ಮರಾಠಿ ನಾಯಕ ಸಮುದಾಯದ ಯುವಕರು ಮನೆಯಲ್ಲಿರುವ ಬಣ್ಣ ಬಣ್ಣದ ಬಟ್ಟೆಯನ್ನು ತೊಟ್ಟು, ತಮ್ಮ ಕುಲದೇವಿ ಮಮ್ಮಾಯಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಬಳಿಕ ಊರಿಗೆ ಬಂದು ಗುಮ್ಮಟೆ ಮತ್ತು ಜಾಗಟೆಯನ್ನು ಬಡಿಯುತ್ತಾ ಮಹಾಮಾಯಿ ದೇವಿಯ ಸ್ಥುತಿಯನ್ನು ಹಾಡುತ್ತಾರೆ. ನಂತರ ಹೋಳಿಯ ಹಾಡನ್ನು ಹಾಡುತ್ತಾ ಕುಣಿಯುತ್ತಾರೆ.

ಹೋಳಿ ಕುಣಿತದ ತಂಡ ಮನೆಯ ಮುಂದೆ ಬರುತ್ತಿದ್ದಂತೆ ಮನೆ ಯಜಮಾನರು ಈ ತಂಡಕ್ಕೆ ಬೆಲ್ಲ ನೀರು ನೀಡಿ ಉಪಚರಿಸುತ್ತಾರೆ. ಈ ಹೋಳಿ ತಂಡದಲ್ಲಿ ಸಾಮಾನ್ಯವಾಗಿ ಸುಮಾರು 20 ರಿಂದ 25 ಜನರು ಇದ್ದು ಸಂಜೆಯ ವೇಳೆಗೆ ಆರಂಭವಾಗುವ ಈ ಕುಣಿತ ಮದ್ಯರಾತ್ರಿಯವರೆಗೆ ಮುಂದುವರೆಯುತ್ತದೆ.








