ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಪ್ರಶಾಂತ್ ಸಂಬರಗಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದ ಶೇಕ್ ಫಾಸಿಲ್ ಜತೆ ಸಂಪರ್ಕ ಹೊಂದಿದ್ದ ಫೋಟೋ ಹಾಘೂ ವಿಡಿಯೋ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್‍ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಸ್ಯಾಂಡಲ್‍ವುಡ್‍ನ ನಟಿಯರನ್ನು ಕರೆದೊಯ್ದು ಡ್ರಗ್ಸ್ ಪಾರ್ಟಿ ಆಯೋಜಿಸಿದ್ದ ಶೇಕ್ ಫಾಸಿಲ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಫಾಸಿಲ್‍ನ ಪೋಷಕರನ್ನು ಕರೆಸಿ ವಿಚಾರಣೆ ನಡೆಸಿದರೂ ಆತನ ಸುಳಿವು ಪತ್ತೆಯಾಗಿಲ್ಲ. ಫಾಸಿಲ್‍ನ ಗೆಳತಿಯನ್ನು ವಿಚಾರಣೆ ಮಾಡಿದ್ರೂ ಫಾಸಿಲ್ ಅಡಗಿರುವ ರಹಸ್ಯ ಗೊತ್ತಾಗಿಲ್ಲ.
ಶಾಸಕ ಜಮೀರ್ ಅಹಮದ್ ಜತೆ ಶೇಕ್ ಫಾಸಿಲ್ ಗುರುತಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಶೇಕ್ ಫಾಸಿಲ್ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದರ ಬಗ್ಗೆ ಜಮೀರ್‍ರಿಂದ ಸಿಸಿಬಿ ಪೊಲೀಸರು ಮಾಹಿತಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಜಮೀರ್ ಆಪ್ತ ಶೇಕ್ ಫಾಸಿಲ್ ಬಗ್ಗೆ ನಿನ್ನೆ ಕೆಲ ಮಾಹಿತಿಗಳನ್ನು ಸಿಸಿಬಿ ಪೊಲೀಸರಿಗೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಜಮೀರ್‍ರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಶೇಕ್ ಫಾಸಿಲ್‍ನ ಡ್ರಗ್ಸ್ ದಂಧೆ ಹಾಗೂ ವ್ಯವಹಾರಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡುವಂತೆ ಪ್ರಶಾಂತ್ ಸಂಬರಗಿಗೆ ಮತ್ತೊಮ್ಮೆ ಸಿಸಿಬಿ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಕರೆಯಲಿದ್ದಾರೆ ಎನ್ನಲಾಗಿದೆ. ನಿನ್ನೆ ಸಂಬರಗಿ ಹೇಳಿದಂತೆ ಬರುವ ಶುಕ್ರವಾರ ಮತ್ತೊಮ್ಮೆ ಕರೆಯುತ್ತೇವೆ. ಅಷ್ಟರೊಳಗೆ ಡಿಜಿಟಲ್ ಸಾಕ್ಷ್ಯ ಸಂಗ್ರಹಿಸುವಂತೆ ಸಿಸಿಬಿ ಪೊಲೀಸರು ಸೂಚಿಸಿದ್ದಾಗಿ ಸಂಬರಗಿ ಹೇಳಿದ್ದರು.
ಆಪ್ತ ಶೇಕ್ ಫಾಸಿಲ್‍ನಿಂದಾಗಿ ಶಾಸಕ ಜಮೀರ್ ಅಹಮದ್‍ರನ್ನು ಡ್ರಗ್ಸ್ ದಂಧೆ ಉರುಳು ಸುತ್ತಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.








