ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲದ ತನಿಖೆ ಜೋರಾಗಿ ನಡೆಯುತ್ತಿರುವಾಗಲೇ ತನಿಖೆಗೆಯ ಮಾಹಿತಿ ಸೋರಿಕೆ ಮಾಡುವುದರ ಜೊತೆಗೆ ಕಸ್ಟಡಿಯಲ್ಲಿದ್ದ ಆರೋಪಿಗಳಿಗೆ ಮೊಬೈಲ್ ನೀಡಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಸಿಸಿಬಿ ಎಸಿಪಿ ಮುಧವಿ ಹಾಗೂ ಪೇದೆ ಮಲ್ಲಿಕಾರ್ಜುನನ್ನು ಅಮಾನತು ಮಾಡಲಾಗಿದೆ.
ಸಿಸಿಬಿಯ ಮಹಿಳಾ ಸಂರಕ್ಷಣಾ ಘಟಕದ ಅಧಿಕಾರಿಯಾಗಿರುವ ಎಸಿಪಿ ಮುಧವಿ, ವಿಚಾರಣೆ ಸಮಯದಲ್ಲಿ ಡ್ರಗ್ಸ್ ಪೆಡ್ಲರ್ ವಿರೇನ್ ಖನ್ನಾಗೆ ಮೊಬೈಲ್ ನೀಡಿದ್ದು, ಇದಕ್ಕಾಗಿ 50 ಲಕ್ಷಕ್ಕೆ ಡೀಲ್ ಕುದುರಿಸಿಕೊಂಡಿದ್ದರು ಎನ್ನಲಾಗಿದೆ.
ರಾತ್ರಿ ವೇಳೆ ಪೇದೆ ಮಲ್ಲಿಕಾರ್ಜುನ ಮೂಲಕ ಮೊಬೈಲ್ ನೀಡಿ ಸಹಕಾರ ನೀಡಿದ ಆರೋಪದ ಜೊತೆಗೆ ಡ್ರಗ್ಸ್ ತನಿಖೆಯ ಮಾಹಿತಿ ಸೋರಿಕೆ ಮಾಡುತ್ತಿರುವುದು ಕಂಡು ಬಂದಿತ್ತು ಎನ್ನಲಾಗಿದೆ. ಜೊತೆಗೆ ತನಿಖೆಯ ಸಮಯದಲ್ಲಿ ಆರೋಪಿಗಳು ಹಾಗೂ ಅವರ ಸಹಚರರೊಂದಿಗೆ ಮುಧವಿ ಸಂಪರ್ಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಮುಧವಿ ಹಾಗೂ ಮಲ್ಲಿಕಾರ್ಜುನನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಮಾಹಿತಿ ಸೋರಿಕೆ ಹಿನ್ನೆಲೆ ಅಮಾನತು: ಸಂದೀಪ್ ಪಾಟೀಲ್
ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತನಿಖೆ ಸಮಯದಲ್ಲಿ ಮಾಹಿತಿಯನ್ನು ಆರೋಪಿಗಳ ಕಡೆಯವರಿಗೆ ಸೋರಿಕೆ ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಯಾರು ಮಾಹಿತಿ ಸೋರಿಕೆ ಮಾಡುತ್ತಿದ್ದರು ಎಂಬುದರ ಬಗ್ಗೆ ಆಂತರಿಕ ತನಿಖೆ ಮಾಡಿದ್ದೇವೆ. ಅಂತರಿಕ ತನಿಖೆಯಲ್ಲಿ ಎಸಿಪಿಯೊಬ್ಬರು ಮಾಹಿತಿ ಲೀಕ್ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.








