ಕಾಂಗ್ರೆಸ್ ಪಕ್ಷದ ನಿಯೋಜಿತ ಅಧ್ಯಕ್ಷ ಡಿ.ಕೆ ಶಿವಕುಮಾರ ಇಂದು ಕಾಂಗ್ರೆಸ್ ನಾಯಕರೊಟ್ಟಿಗೆ ಮೊದಲ ಸಭೆ ನಡೆಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ನನಗೆ ಅಧಿಕಾರ ಕೊಟ್ಟಿಲ್ಲ, ಜವಾಬ್ಧಾರಿ ನೀಡಿದೆ. ನನ್ನ ಮೇಲೆ ವಿಶ್ವಾಸ ಇಟ್ಟು, ಮೂವರು ಕಾರ್ಯಾಧ್ಯಕ್ಷರನ್ನ ನೇಮಕ ಮಾಡಿದ್ದಾರೆ. ಹೊಸ ತಂಡವನ್ನು ಎಐಸಿಸಿ ನೀಡಿದೆ. ನಮಗೆ ಕೊಟ್ಟಿರೋದು ಅಧಿಕಾರ ಅಲ್ಲ, ಅದು ಜವಾಬ್ದಾರಿ. ಕಾಂಗ್ರೆಸ್ ಪಕ್ಷದ ಬಲವರ್ಧನೆ ಮಾಡಲು ನಮಗೆ ಅವಕಾಶ ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಉತ್ಸಾಹ ಬರುವ ರೀತಿ ಕೆಲಸ ಮಾಡಬೇಕಿದೆ. ತಳಮಟ್ಟದಿಂದ ಪಕ್ಷ ಕಟ್ಟಲು ನಾವು ತೀರ್ಮಾನ ಮಾಡಿದ್ದೇವೆ. ಹೀಗಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗದುಕೊಂಡು ಮುಂದೆ ಹೋಗುತ್ತೇವೆ. ಕಾರ್ಯಕರ್ತರು ಹಾಗು ನಾಯಕರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ನಂಬಿಕೆ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ದೇಶದ ಎಲ್ಲ ಕಡೆ ಬಿಜೆಪಿಗೆ ಅಧಿಕಾರ ಕೊಟ್ಟಿದ್ರೂ ಅವರಿಗೆ ಅದು ಸಾಲುತ್ತಿಲ್ಲ. ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷದ ನಾಯಕರನ್ನು ಸೆಳೆಯುತ್ತಿದೆ.
ಶಿಸ್ತು ಪಾಲನೆಗೆ ಆಧ್ಯತೆ
ಜಾತಿ, ನೀತಿ ಮೇಲೆ ನಾನು ಮಾತನಾಡಲ್ಲ. ಎಲ್ಲ ಸಮುದಾಯಗಳ ಬಗ್ಗೆಯೂ ಒತ್ತು ನೀಡುತ್ತೇವೆ. ನಮಗೆ ಕ್ವಾಂಟಿಟಿ ಬೇಕಿಲ್ಲ, ಕ್ವಾಲಿಟಿ ಬೇಕಿದೆ. ಶಿಸ್ತು ಪಾಲನೆಗೆ ಮೊದಲ ಆದ್ಯತೆ. ಪಕ್ಷಕ್ಕೆ ನಿಷ್ಠೆ ತೋರುವವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು. ವಿಧಾನಸಭೆ ಕಲಾಪ ಹಾಗು ಸಂಸತ್ ಅಧಿವೇಶನ ಮುಗಿದ ನಂತರ ಮೂವರು ಕಾರ್ಯಾಧ್ಯಕ್ಷರ ಜೊತೆ ಪಕ್ಷದ ಪ್ರಮುಖ ನಾಯಕರ ಜೊತೆ ದೆಹಲಿಗೆ ಹೋಗುತ್ತೇವೆ. ದೆಹಲಿಗೆ ಹೋಗಿ ಸೋನಿಯಾ ಗಾಂಧಿಜೀ ,ರಾಹುಲ್ ಗಾಂಧಿ ಹಾಗು ಇತರೆ ಮುಖಂಡರನ್ನ ಭೇಟಿ ಮಾಡುತ್ತೇವೆ ಎಂದು ಹೇಳಿದರು. ಈ ವೇಳೆ ನೂತನ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಹಾಗೂ ಸಲಿಂ ಅಹಮದ್ ಉಪಸ್ಥಿತರಿದ್ದರು.









