ಕೆಫೆ ಕಾಫಿ ಡೆ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಖಾತೆಯಿಂದ 20 ಬಿಲಿಯನ್ ರೂಪಾಯಿಗಳು ಕಾಣೆಯಾಗಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ್ ಆತ್ಮಹತ್ಯೆ ಪ್ರಕರಣದ ನಂತರ ನಡೆಸಲಾಗುತ್ತಿರುವ ಆಂತರಿಕ ತನಿಖೆ ಸಂದರ್ಭ ಈ ವಿಚಾರ ಬಯಲಾಗಿದೆ. ಸಿದ್ಧಾರ್ಥ್ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಅಶೋಕ್ ಕುಮಾರ್ ಮಲ್ಹೋತ್ರಾ ಈ ಕುರಿತು ಸಮಗ್ರ ತನಿಖೆಯಲ್ಲಿ ನಿರತವಾಗಿದ್ದು, ತನಿಖೆ ಸಂದರ್ಭ ಭಾರೀ ಮೊತ್ತದ ಹಣ ನಾಪತ್ತೆಯಾಗಿರುವದನ್ನು ಪತ್ತೆ ಹಚ್ಚಿದ್ದಾರೆ. ಸಿದ್ಧಾರ್ಥ ಅವರ ಆತ್ಮಹತ್ಯೆಯ ನಂತರ ತಿಂಗಳುಗಳ ಕಾಲ ನಡೆದ ಈ ತನಿಖೆಯು ಭಾರತದ ಅತಿ ದೊಡ್ಡ ಕಾಫಿ ಕೆಫೆಯ ಹಣಕಾಸಿನ ವಹಿವಾಟುಗಳನ್ನು ಮತ್ತು ಡಜನ್ ಗಟ್ಟಲೆ ಉದ್ಯಮಿಗಳ ಒಡೆತನದ ಖಾಸಗಿ ಕಂಪನಿಗಳೊಂದಿಗಿನ ವ್ಯವಹಾರಗಳನ್ನು ಪರಿಶೀಲಿಸಿದೆ. ಈ ಕುರಿತು ತಯಾರಿಸಲಾದ ನೂರಾರು ಪುಟಗಳ ವರದಿಯಲ್ಲಿ ಈ ವಿಚಾರಗಳ ಉಲ್ಲೇಖವಿರುವುದಾಗಿ ಕಂಪೆನಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿದ್ಧಾರ್ಥ್ ಸಂಸ್ಥೆಯ ಹೆಸರಲ್ಲಿ ನಡೆಸಿದ ಬ್ಯಾಂಕಿಂಗ್ ವ್ಯವಹಾರ, ವೈಯಕ್ತಿಕ ವ್ಯವಹಾರಗಳ ಬಗ್ಗೆಯೂ ಅಶೋಕ್ ಮಲ್ಹೋತ್ರಾ ತನಿಖೆ ನಡೆಸಿದ್ದಾರೆ. ಆದರೂ ಇದುವರೆಗೂ ಹಣ ಕಾಣೆಯಾಗಿರುವ ಬಗ್ಗೆ ಆಗಲಿ, ಇಲ್ಲವೇ ಸಿದ್ದಾರ್ಥ್ ವೈಯಕ್ತಿಕ ವ್ಯವಹಾರದ ಬಗ್ಗೆಯಾಗಲೀ ತನಿಖಾಧಿಕಾರಿ ಅಶೊಕ್ ಕುಮಾರ್ ಮಲ್ಹೋತ್ರಾ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ತನಿಖೆ ಪ್ರಗತಿಯಲ್ಲಿದ್ದು, ಇನ್ನೊಂದು ವಾರದೊಳಗಾಗಿ ಅಂತಿಮ ಷರಾ ಬರೆಯುವ ಸಾಧ್ಯತೆ ಇದೆ. ವರದಿಯು ಈ ವಾರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಆ ಸಂದರ್ಭದಲ್ಲಿ ಈ ಎಲ್ಲಾ ವಿಚಾರಗಳು ಬಹಿರಂಗಗೊಳ್ಳುತ್ತಾ ಅನ್ನುವ ಕೌತುಕ ಹೆಚ್ಚಿಸಿದೆ.

ಕಂಪೆನಿಯ ಇನ್ನೊಂದು ಮೂಲದ ಪ್ರಕಾರ ಕಾಣೆಯಾಗಿರುವ ನಗದು 25 ಬಿಲಿಯನ್‌ಗೂ ಹೆಚ್ಚಿದೆ ಎನ್ನಲಾಗಿದೆ. ಆದರೆ ಕಂಪೆನಿಯ ಅಧಿಕೃತ ವಕ್ತಾರರು ಈ ಎಲ್ಲಾ ವಿಚಾರಗಳನ್ನು ಅಲ್ಲಗಳೆದಿದ್ದು, ತನಿಖಾ ವರದಿಯು ಇನ್ನೂ ಅಂತಿಮಗೊಂಡಿಲ್ಲ, ಅಂತಿಮ ಹಂತವನ್ನು ತಲುಪಿಲ್ಲ. ನಿರ್ದೇಶಕರ ಮಂಡಳಿ ಮತ್ತು ಕಂಪನಿಗೆ ಈ ಸಮಯದಲ್ಲಿ ಅದರ ವಿಷಯದ ಬಗ್ಗೆ ತಿಳಿದಿಲ್ಲ. ಆದ್ದರಿಂದ ತನಿಖೆಯ ಬಗ್ಗೆ ಊಹಿಸುವುದು ಸರಿಯಲ್ಲ” ಎಂದು ತಿಳಿಸಿದ್ದಾರೆ.
ಸಿದ್ಧಾರ್ಥರವರ ಕುಟುಂಬ ಹಾಗೂ ಆಡಳಿತ ಮಂಡಳಿಯು ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ವ್ಯವಹಾರವನ್ನು ನಡೆಸುವುದು ಮತ್ತು ಎಲ್ಲಾ ಶೇರುದಾರರ ಹಾಗೂ ಉದ್ಯೋಗಿಗಳ ಭಾದ್ಯತೆಗಳನ್ನು ಪೂರೈಸಲು ಬದ್ಧವಾಗಿದೆ ಎಂದು ಕಂಪೆನಿ ವಕ್ತಾರರು ಹೇಳಿದ್ದಾರೆ.
59 ವರ್ಷದ ಕೆಫೆ ಕಾಫಿ ಡೆ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಕಳೆದ ವರ್ಷ ಮಂಗಳೂರಿನ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿದ್ಧಾರ್ಥ ಸಹಿ ಮಾಡಿದಂತೆ ಕಂಡು ಬರುವ ಕಾಫಿ ಡೆ ಮಂಡಳಿ ಮತ್ತು ಉದ್ಯೋಗಿಗಳಿಗೆ ನೀಡಿದ ಪತ್ರಗಳಲ್ಲಿ ಭಾರಿ ಸಾಲಗಳ ಬಗ್ಗೆ ವಿವರಿಸಲಾಗಿತ್ತು. ಅಲ್ಲದೆ ಸಾಲದಾತರು ಮತ್ತು ತೆರಿಗೆ ಅಧಿಕಾರಿಗಳ ಒತ್ತಡದ ಬಗ್ಗೆಯೂ ಉಲ್ಲೇಖವಿತ್ತು.
1,500 ಕ್ಕೂ ಹೆಚ್ಚು ಶಾಖೆಗಳನ್ನು ದೇಶದಾದ್ಯಂತ ಹೊಂದಿರುವ ಕೆಫೆ ಕಾಫಿ ಡೆ ಸಿದ್ದಾರ್ಥ ರ ಮರಣದ ನಂತರ ಅದರ ಷೇರುಗಳು ಸುಮಾರು 90% ನಷ್ಟು ಕುಸಿದಿದ್ದವು ಮತ್ತು ಅದರ ಮಾರುಕಟ್ಟೆ ಮೌಲ್ಯವು ಸುಮಾರು 80 ದಶ ಲಕ್ಷಕ್ಕೆ ಇಳಿದಿತ್ತು. 2019 ರ ಹಣಕಾಸು ವರ್ಷಾಂತ್ಯಕ್ಕೆ 24 ಬಿಲಿಯನ್ ನಗದು ಹೊಂದಿದ್ದ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ ಖಾತೆಯಲ್ಲಿ ಸಿದ್ದಾರ್ಥ್ ಸಾವಿನ ನಂತರ ʼಝೀರೋ ಬ್ಯಾಲೆನ್ಸ್ʼ ಇತ್ತು ಅನ್ನುವ ವಿಚಾರವು ಅಚ್ಚರಿಯನ್ನು ಮೂಡಿಸಿದೆ.








