ಟೀಮ್ ಇಂಡಿಯಾದ ಥ್ರೋ ಡೌನ್ ಸ್ಪೇಷಲಿಸ್ಟ್ ರಾಘವೇಂದ್ರಗೆ ಕೋವಿಡ್ ಪಾಸಿಟಿವ್..!
ರಾಘವೇಂದ್ರ
ಭಾರತೀಯ ಕ್ರಿಕೆಟ್ ನಲ್ಲಿ ರಾಘವೇಂದ್ರ ರಾಘು ಅನ್ನೋ ಹೆಸರು ಚಿರಪರಿಚಿತ.
ಹಾಗಂತ ರಾಘು ಕ್ರಿಕೆಟ್ ಆಟಗಾರನಲ್ಲ.. .. ತರಬೇತುದಾರನೂ ಅಲ್ಲ… ಆದ್ರೂ ಟೀಮ್ ಇಂಡಿಯಾ ಆಟಗಾರರಿಗೆ ರಾಘು ಅಲಿಯಾಸ್ ರಾಘವೇಂದ್ರ ಬೇಕೇ ಬೇಕು.
ಹೌದು, ರಾಘು ಥ್ರೋ ಡೌನ್ ಸ್ಪೇಷಲಿಸ್ಟ್. ಟೀಮ್ ಇಂಡಿಯಾದ ಆಟಗಾರರಿಗೆ ನೆಟ್ಸ್ ನಲ್ಲಿ ಆಡಿಸುವ ಕಿಲಾಡಿ.
ಥ್ರೋ ಡೌನ್ ಸ್ಪೇಷಲಿಸ್ಟ್ ಆಗಿರುವ ರಾಘವೇಂದ್ರ ಕ್ರಿಕೆಟ್ ಆಟಗಾರರ ಬ್ಯಾಟಿಂಗ್ ಅನ್ನು ಪರೀಕ್ಷೆ ಮಾಡುತ್ತಾರೆ. ತನ್ನ ಮ್ಯಾಜಿಕ್ ಎಸೆತಗಳ ಮೂಲಕ ಬ್ಯಾಟ್ಸ್ ಮೆನ್ ಗಳನ್ನು ಬೆವರಿಳಿಸುವಂತೆ ಮಾಡುತ್ತಾರೆ. ಬ್ಯಾಟಿಂಗ್ ತಾಂತ್ರಿಕ ತೊಂದರೆಗಳನ್ನು ಕೂಡ ಸರಿಪಡಿಸಿಕೊಳ್ಳುವಂತಹ ಸಲಹೆಗಳನ್ನು ನೀಡುತ್ತಾರೆ. ಹೀಗಾಗಿ ರಾಘು ಅಂದ್ರೆ ಟೀಮ್ ಇಂಡಿಯಾ ಆಟಗಾರರಿಗೆ ವಿಶೇಷ ಪ್ರೀತಿ.
ಅಂದ ಹಾಗೇ ರಾಘು ಅವರ ಪ್ರತಿಭೆಯನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದು ಸಚಿನ್ ತೆಂಡುಲ್ಕರ್.
ಸಚಿನ್ ತೆಂಡುಲ್ಕರ್ ಟೆನಿಸ್ ಎಲ್ಬೋ ನೋವಿನಿಂದ ಬಳಲುತ್ತಿದ್ದ ಸಮಯ. ಆಗ ರಾಘು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಈ ಸಮಯದಲ್ಲಿ ಸಚಿನ್ ತೆಂಡುಲ್ಕರ್ ಕಣ್ಣಿಗೆ ಬಿದ್ದವರು ರಾಘವೇಂದ್ರ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನೆಟ್ಸ್ ನಲ್ಲಿ ಸಚಿನ್ ತೆಂಡುಲ್ಕರ್ ಅವರನ್ನು ತಮ್ಮ ವಿಭಿನ್ನ ಶೈಲಿಯ ಎಸೆತಗಳ ಮೂಲಕ ಆಡಿಸುತ್ತಿದ್ದದ್ದು ಇದೇ ರಾಘವೇಂದ್ರ.
ಆ ನಂತರ ರಾಘು ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಯಾವುದೇ ಸರಣಿಯಾಗಲಿ, ಸಚಿನ್ ತೆಂಡುಲ್ಕರ್ ಗೆ ನೆಟ್ಸ್ ನಲ್ಲಿ ಅಭ್ಯಾಸ ಮಾಡುವಾಗ ರಾಘವೇಂದ್ರ ಅವರ ಥ್ರೋ ಡೌನ್ ಎಸೆತಗಳು ಬೇಕೇಬೇಕು. ಅಷ್ಟೇ ಅಲ್ಲ, ಸಚಿನ್ ತೆಂಡುಲ್ಕರ್ ಅವರು ರಾಘವೇಂದ್ರ ಅವರನ್ನು ಮುಂಬೈಗೂ ಕರೆಸಿಕೊಂಡಿದ್ದರು. ಕೆಲವೊಂದು ಸರಣಿಗಳಿಗೂ ಕರೆದುಕೊಂಡು ಹೋಗಿದ್ದರು.
ನಂತರದ ದಿನಗಳಲ್ಲಿ ರಾಘವೇಂದ್ರ ಅವರು ಟೀಮ್ ಇಂಡಿಯಾದ ತರಬೇತಿ ಸಿಬ್ಬಂದಿಗಳ ಸಾಲಿನಲ್ಲಿ ಸೇರಿಕೊಂಡ್ರು. ಟೀಮ್ ಇಂಡಿಯಾ ಆಟಗಾರರಿಗೆ ಥ್ರೋ ಡೌನ್ ಎಸೆತಗಳ ಮೂಲಕ ನೆಟ್ಸ್ ನಲ್ಲಿ ಸಹಕಾರ ನೀಡುತ್ತಿದ್ದರು.
ಇದೀಗ ರಾಘವೇಂದ್ರ ಅವರಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅಡ್ಡಿಯಾಗಿದ್ದು ಕೋವಿಡ್-19
ಹೌದು, ರಾಘವೇಂದ್ರ ಅವರ ಕೋವಿಡ್ -19 ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ರಾಘು ಆಸ್ಟ್ರೇಲಿಯಾ ಪ್ರವಾಸಕ್ಕೆ ಅಲಭ್ಯರಾಗುತ್ತಿದ್ದಾರೆ.
ಮೊನ್ನೆ ಮೊನ್ನೆ ತಾನೆ ರಾಘವೇಂದ್ರ ಅವರು ಕೋಚ್ ರವಿಶಾಸ್ತ್ರಿ ಹಾಗೂ ತರಬೇತಿ ಸಿಬ್ಬಂದಿಗಳ ಜೊತೆಗೆ ದುಬೈಗೆ ಹೋಗಬೇಕಾಗಿತ್ತು. ಆದ್ರೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಆಸ್ಟ್ರೇಲಿಯಾ ಸರಣಿಯಿಂದಲೇ ಹೊರಗುಳಿಯಬೇಕಾಗಿದೆ.
ಕ್ರಿಕೆಟ್ ಆಟಗಾರನಾಗಬೇಕು ಅನ್ನೋ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದ ರಾಘವೇಂದ್ರ ಅವರಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯೇ ಮನೆಯಾಗಿತ್ತು. ಆರಂಭದ ದಿನಗಳಲ್ಲಿ ರಾಘವೇಂದ್ರ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದೀಗ ಟೀಮ್ ಇಂಡಿಯಾ ಆಟಗಾರರಿಗೆ ನೆಚ್ಚಿನ ಥ್ರೋ ಸ್ಪೇಷಲಿಸ್ಟ್ ಆಗಿದ್ದಾರೆ.
ಕ್ರಿಕೆಟಿಗನಾಗದಿದ್ರೂ ರಾಘು ಮಹಾನ್ ಕ್ರಿಕೆಟಿಗರನ್ನೇ ಆಡಿಸುತ್ತಿದ್ದಾರೆ. ಅದೇನೇ ಇರಲಿ, ರಾಘು ಅನುಪಸ್ಥಿತಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ನೆಟ್ಸ್ ನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಕಾಡುವುದಂತೂ ಖಚಿತ.








