ಇಂದು (ಮೇ 29) ಬಿಸಿಸಿಐ ಸಾಮಾನ್ಯ ಸಭೆ – ಐಪಿಎಲ್ ಟೂರ್ನಿ ಮುಂದುವರಿಸುವ ಬಗ್ಗೆ ಚರ್ಚೆ
ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸಾಮಾನ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸ್ಥಗಿತಗೊಂಡಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯುಎಇ ನಲ್ಲಿ ಆಡಿಸುವ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಸೆಪ್ಟಂಬರ್ 15ರಿಂದ ಅಕ್ಟೋಬರ್ 15ರವರೆಗೆ ಸಿಗುವ ಅವಧಿಗಳನ್ನು ಪರಿಗಣಿಸಿಕೊಂಡು ಐಪಿಎಲ್ ನ ಇನ್ನುಳಿದಿರುವ ಪಂದ್ಯಗಳನ್ನು ಆಯೋಜನೆ ಮಾಡುವ ಯೋಚನೆ ಬಿಸಿಸಿಐನ್ನದಾಗಿದೆ. ಆದ್ರೆ ಇದೇ ವೇಳೆ ಅಂತಾರಾಷ್ಟ್ರೀಯ ಪಂದ್ಯಗಳು ಕೂಡ ನಡೆಯಲಿವೆ. ಹೀಗಾಗಿ ಅಂತರಾರಾಷ್ಟ್ರೀಯ ವೇಳಾಪಟ್ಟಿಯನ್ನು ಮುಂದಿಟ್ಟುಕೊಂಡು ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ.
ಇನ್ನುಳಿದಂತೆ ಐಸಿಸಿ ಟಿ-20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುವ ಬಗ್ಗೆ ಬಿಸಿಸಿಐ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಕುರಿತಂತೆ ಬಿಸಿಸಿಐ ಮತ್ತೆ ಜೂನ್ 1ರಂದು ಸಭೆ ನಡೆಸಲಿದೆ. ಭಾರತದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಜಾಸ್ತಿಯಾಗಿದ್ದು, ಈ ಬಗ್ಗೆ ಐಸಿಸಿ
ಜೊತೆ ಚರ್ಚೆ ಕೂಡ ನಡೆಸಬೇಕಿದೆ. ಇನ್ನೊಂದೆಡೆ, ರಣಜಿ ಪಂದ್ಯದ ಆಟಗಾರರ ಪರಿಹಾರ ಧನದ ಬಗ್ಗೆ ಚಿಂತನೆ ನಡೆಸಲಿದೆ.
ಈ ನಡುವೆ ಬಿಸಿಸಿಐಗೆ ಐಪಿಎಲ್ ಟೂರ್ನಿಯನ್ನು ಮುಂದುವರಿಸುವುದು ಸವಾಲಿನ ಪ್ರಶ್ನೆಯಾಗಿದೆ. ಮುಖ್ಯವಾಗಿ ವಿದೇಶಿ ಆಟಗಾರರ ಲಭ್ಯತೆಯನ್ನು ಕೂಡ ಪರಿಗಣಿಸಬೇಕಿದೆ. ಈಗಾಗಲೇ ಇಂಗ್ಲೆಂಡ್ ಆಟಗಾರರು ಮುಂದುವರಿಯುವ ಐಪಿಎಲ್ ಟೂರ್ನಿಗೆ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ.
ಇದ್ರಿಂದ ಬಿಸಿಸಿಐ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಜೊತೆ ಚರ್ಚೆ ನಡೆಸಿ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ.








