ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಆರ್ಭಟಿಸುತ್ತಿದೆ. ಮತ್ತೊಂದೆಡೆ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದ ದೇಶದ ಎಲ್ಲಾ ರಾಜ್ಯಗಳು ಸಂಕಷ್ಟಕ್ಕೆ ಸಿಲುಕಿವೆ. ಕೊರೊನಾ ವೈರಸ್ ಮತ್ತು ಲಾಕ್‌ಡೌನ್ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರಗಳು ಪಡಿಪಾಟಿಲು ಪಡುತ್ತಿವೆ. ಹೀಗಾಗಿ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿವೆ. ಅದರಲ್ಲೂ ಹಣ ಕೊಡದೆ ಸತಾಯಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಗಳಿಗೆ ಸಂಪನ್ಮೂಲ ಕೊಡದೆ ಅಸಹಕಾರ ತೋರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖ್ಯಮಂತ್ರಿಗಳು ಅಸಮಾಧಾನ ಹೊರಹಾಕಿದ್ದಾರೆ. ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಹಣ ಇಲ್ಲದೆ ಈ ಕಷ್ಟದ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂದು ಕೇಂದ್ರ ಸರ್ಕಾರದ ಮೇಲೆ ಪಂಜಾಬ್, ರಾಜಸ್ಥಾನ, ಪುದುಚೇರಿ, ಛತ್ತೀಸ್ ಗಢ ಕಾಂಗ್ರೆಸ್ ಮುಖ್ಯಮಂತ್ರಿಗಳು ಮುಗಿಬಿದ್ದಿದ್ದಾರೆ.
ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಮೂರು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ.
1) ಕೊರೋನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಕೂಡಲೇ ರಾಜ್ಯಗಳಿಗೆ ಹಣ ಬಿಡುಗಡೆ ಮಾಡಬೇಕು.
2) 3 ತಿಂಗಳವರೆಗೆ ವಿಶೇಷ ಕೋವಿಡ್ ನಿಧಿ ನೀಡಬೇಕು.
3) ಹಣಕಾಸು ಆಯೋಗದ ಶಿಫಾರಸ್ಸನ್ನು ಪರಿಶೀಲಿಸಬೇಕು.
ಪ್ರಧಾನಿಗೆ ಪತ್ರ ಬರೆದಿರುವುದಲ್ಲದೆ ಈ ಮೂರು ಅಂಶಗಳ ಬಗ್ಗೆ ಒತ್ತಡ ಹೇರುವಂತೆ ಮನವಿ ಮಾಡಿ ಎಲ್ಲಾ ರಾಜ್ಯಗಳಿಗೂ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ಮೊನ್ನೆ ಛತ್ತೀಸ್ ಗಢ ಮುಖ್ಯಮಂತ್ರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು 30 ಸಾವಿರ ಕೋಟಿ ರೂಪಾಯಿ ಹಣ ನೀಡಬೇಕೆಂದು ಒತ್ತಾಯಿಸಿದ್ದರು. ಆ ಪೈಕಿ 10 ಸಾವಿರ ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರು








