ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು : ಸಿದ್ದರಾಮಯ್ಯ
ಬೆಂಗಳೂರು : ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು. ಇಲ್ಲಿ ಜನಾಭಿಪ್ರಾಯವೇ ಅಂತಿಮ. ಮಠಾಧೀಶರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಠಗಳ ಬಗ್ಗೆ ಜನರಿಗಿರುವ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ ಎಂದು ಸಿಎಂ ಬಿಎಸ್ ವೈ ಪರ ಮಠಾಧೀಶರು ಬ್ಯಾಟ್ ಬೀಸುತ್ತಿರುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ತಮ್ಮ ಟ್ವೀಟ್ ನಲ್ಲಿ ದಲಿತರ ಬಗ್ಗೆ ಬಿಜೆಪಿ ಅವರಿಗೆ ನೈಜ ಕಾಳಜಿ ಇದ್ದರೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬಳಿಕ ದಲಿತರನ್ನೇ ಮುಖ್ಯಮಂತ್ರಿ ಮಾಡಲಿ. ಇದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ನನ್ನ ಸವಾಲು.
ಸಿದ್ದರಾಮಯ್ಯ ದಲಿತರನ್ನು ಸಿಎಂ ಮಾಡಲಿ ಎಂದು ಕಟೀಲ್ ನನಗೆ ಹೇಳಿದ್ದರು. ನಮ್ಮ ಪಕ್ಷದಲ್ಲಿ ದಲಿತರು ಸಿಎಂ ಆಗಿದ್ದಾರೆ. ಹೀಗಾಗಿ ಸದ್ಯ ಬಿಜೆಪಿಗೆ ಆ ಅವಕಾಶ ಇದೆ, ನಳಿನ್ ಕುಮಾರ್ ಕಟೀಲ್ ಅವರು ಈಗ ದಲಿತರನ್ನು ಸಿಎಂ ಮಾಡಿ, ಸಾಮಾಜಿಕ ನ್ಯಾಯ ಎತ್ತಿಹಿಡಿಯಲಿ ಎಂದು ಕುಟುಕಿದರು.
2019ರಲ್ಲಿ ಬಂದ ಪ್ರವಾಹದಿಂದ ಸಂತ್ರಸ್ತರಾದವರಿಗೇ ಇನ್ನೂ ಬಿಜೆಪಿ ಸರ್ಕಾರ ಪರಿಹಾರ ಕೊಟ್ಟಿಲ್ಲ. ಈಗ ಎಲ್ಲಾ ಕಡೆ ಮಳೆ ಬಂದು ಜನ, ಜಾನುವಾರಗಳ ಪ್ರಾಣ ಹಾನಿಯಾಗಿದೆ, ಮನೆಗಳು ಬಿದ್ದಿವೆ. ಇಂತಹಾ ಸಮಯದಲ್ಲಿ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡೋ ಬದಲು ಸಿಎಂ ಬದಲಾವಣೆ ಮಾಡುವ ಕೆಲಸದಲ್ಲಿ ಮುಳುಗಿದೆ.
ವಲಸಿಗ ಸಚಿವರನ್ನು ಮತ್ತೆ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ನಮ್ಮ ಪಕ್ಷಕ್ಕೆ ಬರುತ್ತಾರೋ, ಇಲ್ಲವೋ ಎನ್ನುವುದು ನನಗಂತೂ ಗೊತ್ತಿಲ್ಲ. ಪಕ್ಷಕ್ಕೆ ಅವರನ್ನು ವಾಪಾಸು ಸೇರಿಸಿಕೊಳ್ಳುವುದಿಲ್ಲ ಎಂದು ಈ ಹಿಂದೆ ಸದನದಲ್ಲೇ ಹೇಳಿದ್ದೇನೆ. ಅದಕ್ಕೆ ನಾನು ಈಗಲೂ ಬದ್ಧನಿದ್ದೇನೆ ಎಂದು ತಿಳಿಸಿದ್ದಾರೆ.









