ಬೆಂಗಳೂರು ; ದೇಶದ ಮಹತ್ವಾಕಾಂಕ್ಷೆಯ ನರೇಗಾ ಯೋಜನೆಯ ಶಕ್ತಿ ಎನೆಂಬುದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪನವರಿಗೆ ಗೊತ್ತಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಒಂದು ಕುಟುಂಬಕ್ಕೆ ನರೇಗಾ ಯೋಜನೆಯನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಅರಿವಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಕೊರೊನಾ ವಾರಿಯರ್ಸ್ ಗಳಾದ ನರ್ಸ್ ಗಳಿಗೆ ,ಆಶಾ ಕಾರ್ಯಕರ್ತೆಯರಿಗೆ, ಪೌರಕಾರ್ಮಿಕರಿಗೆ ಪಿಪಿಇ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ಕನಕಪುರದಲ್ಲಿ ನರೇಗಾ ಯೋಜನೆಯ ಯಶಸ್ವಿ ಬಗ್ಗೆ ಕೇಂದ್ರ ಸರ್ಕಾರ ಬಹುಮಾನ ಘೋಷಿಸಿರುವುದರ ಬಗ್ಗೆ ಈಶ್ವರಪ್ಪನವರಿಗೆ ಗೊತ್ತಿಲ್ಲ.
ಯಾವ ಮಾಧ್ಯಮಗಳಲ್ಲಿ ಬೇಕಾದರೂ ನಾನು ಚರ್ಚಿಸಲು ಸಿದ್ಧವಿದ್ದೇನೆ. ನರೇಗಾ ಯೋಜನೆಯ ಬಗ್ಗೆ ನನ್ನ ಬೆರಳ ತುದಿಯಲ್ಲಿ ಮಾಹಿತಿ ಇದೆ. ಇದು ದೇಶದ ವಿಚಾರ, ಮಾನವೀಯತೆ ವಿಚಾರ ಎಂದರು. ಇದರಲ್ಲಿ ರಾಜಕೀಯ ಮಾಡಲು ಹೋಗುವುದಿಲ್ಲ. ಪ್ರತಿಪಕ್ಷದ ಅಧ್ಯಕ್ಷನಾಗಿ ಮಾತನಾಡುತ್ತಿದ್ದೇನೆ. ಈ ಯೋಜನೆಯ ಹಣವನ್ನು ಯಾವ ರೀತಿ ಬಳಸಿಕೊಳ್ಳಬೇಕೆಂದು ಹಿಂದಿನ ಯುಪಿಎ ಸರ್ಕಾರ ಕಾಯ್ದೆಯನ್ನೇ ರೂಪಿಸಿತ್ತು.
ಈಶ್ವರಪ್ಪನವರು ಯಾವ ಮಾಹಿತಿಯೊಂದಿಗಾದರೂ ಬರಲಿ ಈ ಯೋಜನೆಯನ್ನು ಯಾವ ರೀತಿ ಬಳಸಿಕೊಳ್ಳಬೇಕು, ಜನರಿಗೆ ಯಾವ ರೀತಿ ಮುಟ್ಟಿಸಬೇಕು ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ಓಡಿಹೋಗುವ ಜಾಯಮಾನ ನನ್ನದಲ್ಲ ಎಂದು ಗುಡುಗಿದರು.








