ಕುರುಬ ನಾಯಕರನ್ನು ಬೆಳೆಯಲು ಸಿದ್ದರಾಮಯ್ಯ ಬಿಡಲಿಲ್ಲ : ಈಶ್ವರಪ್ಪ
ಮೈಸೂರು : ಒಬ್ಬನೇ ಒಬ್ಬ ಕುರುಬ ನಾಯಕರನ್ನು ಬೆಳೆಯಲು ಸಿದ್ದರಾಮಯ್ಯ ಬಿಡಲಿಲ್ಲ. ಸಿದ್ದರಾಮಯ್ಯ ಹುಲಿಯಾಗುತ್ತಾರೆ ಅಂದುಕೊಂಡಿದ್ದೆವು, ಆದರೆ ಹಸಿವಿನಿಂದ ಒದ್ದಾಡುತ್ತಿರುವ ಇಲಿಯಾಗಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬೆಟ್ಟ ಅಗೆದು ಇಲಿ ಹಿಡಿದಂತೆ ಆಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಿದ್ದರಾಮಯ್ಯ ಹುಲಿಯಾಗುತ್ತಾರೆ ಅಂದುಕೊಂಡಿದ್ದೆವು, ಆದರೆ ಹಸಿವಿನಿಂದ ಒದ್ದಾಡುತ್ತಿರುವ ಇಲಿಯಾಗಿದ್ದಾರೆ.
ಚುನಾವಣೆಗೆ ಇನ್ನೂ 2 ವರ್ಷ ಇದೆ. ಅವರು ರಾಜ್ಯಕ್ಕೆ ಹುಲಿಯಾಗುವ ಬದಲು ಡಿ.ಕೆ.ಶಿವಕುಮಾರ್ ಮೇಲೆ ಹುಲಿಯಾಗಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ನಿಂತು ಹೇಳುತ್ತೇನೆ, ತಮ್ಮ ಸಿಎಂ ಸ್ಥಾನಕ್ಕೆ ಅಡ್ಡಿಯಾಗುತ್ತಾರೆ ಎಂದು ಕಳೆದ ಚುನಾವಣೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಈಶ್ವರಪ್ಪ, ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಬೇಕೆಂದು ಬೆಂಬಲಿಗರು ಬಯಸಿದ್ದರು.
ಕೆಲವರು ನನ್ನನ್ನು ಸಚಿವ ಸ್ಥಾನದಿಂದ ಕೈಬಿಡಲಾಗುತ್ತಿದೆ ಎಂದು ಬಿಂಬಿಸಿದ್ದರು. ಆದರೆ, ಹೈಕಮಾಂಡ್ ನನ್ನನ್ನು ಹೇಗೆ ಪರಿಗಣಿಸಿತು ಎಂದು ಎಲ್ಲರಿಗೂ ಗೊತ್ತಿದೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.










