ಪಿಎಂ ನರೇಂದ್ರ ಮೋದಿ ಜೊತೆ ಐಸ್ ಕ್ರೀಮ್ ಸವಿದ ಪಿ.ವಿ. ಸಿಂಧು..!
ನುಡಿದಂತೆ ನಡೆದ ಪ್ರಧಾನಿ ನರೇಂದ್ರ ಮೋದಿ. ಹೌದು, ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಪಿ.ವಿ. ಸಿಂಧು ಅವರಿಗೆ ಕೊಟ್ಟ ಭರವಸೆಯನ್ನು ಪ್ರಧಾನಿ ಮೋದಿಯವರು ಈಡೇರಿಸಿದ್ದಾರೆ.
ಈ ಹಿಂದೆ ಟೋಕಿಯೋ ಒಲಿಂಪಿಕ್ಸ್ ಗೆ ಮುನ್ನ ಪ್ರಧಾನಿ ಮೋದಿಯವರು ಭಾರತೀಯ ಕ್ರೀಡಾಪಟುಗಳ ಜೊತೆ ಸಂವಾದ ನಡೆಸಿದ್ದರು. ಆ ಸಂವಾದಲ್ಲಿ ಪಿ.ವಿ. ಸಿಂಧು ಅವರಿಗೆ ಮಾತುಕೊಟ್ಟಿದ್ದರು. ಒಲಿಂಪಿಕ್ಸ್ ಮುಗಿದ ನಂತರ ನಿಮ್ಮ ಜೊತೆ ಐಸ್ ಕ್ರೀಮ್ ಸೇವಿಸುತ್ತೇನೆ ಎಂದು. ಹಾಗೇ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಿ. ವಿ. ಸಿಂಧು ಅವರು ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕಂಚು ಗೆದ್ದುಕೊಂಡಿದ್ದರು. ಅಲ್ಲದೆ ಸತತ ಎರಡನೇ ಒಲಿಂಪಿಕ್ ಪದಕ ಗೆದ್ದ ಹಿರಿಮೆಗೂ ಪಾತ್ರರಾಗಿದ್ದರು. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಪಿ.ವಿ. ಸಿಂಧು ಅವರು ಬೆಳ್ಳಿ ಪದಕ ಗೆದ್ದಿದ್ದರು.
ಆಗಸ್ಟ್ 16ರಂದು ಪ್ರಧಾನಿ ತನ್ನ ನಿವಾಸದಲ್ಲಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಅಥ್ಲೀಟ್ ಗಳಿಗೆ ಔತಣಕೂಟವನ್ನು ಏರ್ಪಡಿಸಿದ್ದರು. ಇದೇ ವೇಳೆ ಪ್ರಧಾನಿ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದರು. ಜೊತೆಗೆ ಪಿ.ವಿ. ಸಿಂಧುಗೆ ಕೊಟ್ಟ ಮಾತಿನಂತೆ ಅವರ ಜೊತೆ ಐಸ್ ಕ್ರೀಮ್ ಸವಿದ್ರು..
ಕಷ್ಟಪಟ್ಟು ಅಭ್ಯಾಸ ನಡೆಸಿ. ಯಶಸ್ಸು ನಿಮ್ಮದಾಗುತ್ತೆ ಅನ್ನೋ ವಿಶ್ವಾಸ ನನಗಿದೆ. ನೀವೆಲ್ಲರೂ ಒಲಿಂಪಿಕ್ಸ್ ನಿಂದ ಹಿಂತಿರುಗಿದಾಗ ನಾನು ನಿಮ್ಮ ಜೊತೆ ಐಸ್ ಕ್ರೀಮ್ ತಿನ್ನುತ್ತೇನೆ ಎಂದು ಮೋದಿ ಹೇಳಿದ್ದರು.
ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ಮಾಡಿದ್ದ ಭಾಷಣದಲ್ಲಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮತ್ತು ಸ್ಪರ್ಧಿಸಿದ್ದ ಕ್ರೀಡಾಪಟುಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಒಂದು ಕಾಲದಲ್ಲಿ ಕ್ರೀಡೆಯ ಬಗ್ಗೆ ಅಷ್ಟೊಂದು ಒಲವು ಇರಲಿಲ್ಲ. ಮಕ್ಕಳು ಆಟವಾಡುತ್ತಿದ್ರೆ ಜೀವನ ಹಾಳಾಗುತ್ತೆ ಅಂತ ಭಾವಿಸಲಾಗುತ್ತಿತ್ತು. ಆದ್ರೆ ಈಗ ಹಾಗಲ್ಲ. ದೇಶದಲ್ಲಿ ಕ್ರೀಡೆ ಮತ್ತು ಫಿಟ್ನೆಸ್ ಬಗ್ಗೆ ಅರಿವು ಬಂದಿದೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ನಮ್ಮ ಕ್ರೀಡಾಪಟುಗಳು ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಂತಹ ಕ್ರೀಡಾಪಟುಗಳು ನಮ್ಮ ಜೊತೆಯಲ್ಲಿದ್ದಾರೆ. ಅವರು ನಮ್ಮ ಹೃದಯವನ್ನು ಮಾತ್ರ ಗೆದ್ದಿಲ್ಲ. ಭವಿಷ್ಯದ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ ಎಂದು ಪ್ರಧಾನಿ ತನ್ನ ಭಾಷಣದಲ್ಲಿ ಹೇಳಿದ್ದರು.









