ಲಾಡ್ರ್ಸ್ ಟೆಸ್ಟ್ – ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿಗೆ ಬಾಲಂಗೋಚಿಗಳೇ ಕಾರಣ…!
ಕೆಲವೊಂದು ಬಾರಿ ಟೀಮ್ ಇಂಡಿಯಾದ ಬಾಲಗೊಂಚಿಗಳು ಚಮತ್ಕಾರವನ್ನೇ ಮಾಡುತ್ತಾರೆ. ಸ್ಟಾರ್ ಬ್ಯಾಟ್ಸ್ ಮೆನ್ ಗಳುನ ಕೈಕೊಟ್ಟಾಗ ಕೆಳ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ತಂಡಕ್ಕೆ ಆಧಾರವಾಗಿ ನಿಲ್ಲುತ್ತಾರೆ. ಇಂತಹ ಸನ್ನಿವೇಶಗಳು ಟೀಮ್ ಇಂಡಿಯಾದಲ್ಲಿ ಕಾಣುವುದು ತೀರಾ ಅಪರೂಪ. ಅದನ್ನು ಚಮತ್ಕಾರ ಅನ್ನಬೇಕೋ… ಪವಾಡ ಅನ್ನೋಬೇಕೋ. ಅಥವಾ ಅದೃಷ್ಟ ಅನ್ನಬೇಕೋ…
ಅದೇನೇ ಇರಲಿ.. ಲಾಡ್ರ್ಸ್ ಟೆಸ್ಟ್ ನಲ್ಲಿ ಆಗಿದ್ದು ಅದೇ… ಮೊದಲ ಇನಿಂಗ್ಸ್ ನಲ್ಲಿ ಕೆ.ಎಲ್. ರಾಹುಲ್ ಆಕರ್ಷಕ ಶತಕ, ರೋಹಿತ್ ಶರ್ಮಾ ಅವರ ಅಮೋಘ ಅರ್ಧಶತಕ.. ಹಾಗೇ ಎರಡನೇ ಇನಿಂಗ್ಸ್ ನಲ್ಲಿ ಅಜಿಂಕ್ಯಾ ರಹಾನೆಯ ಅಮೂಲ್ಯ ಅರ್ಧಶತಕ ಮತ್ತು ಚೇತೇಶ್ವರ ಪೂಜಾರ ಅವರ ಆಮೆಗತಿಯ ಆಟ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದ್ರೂ ಕೂಡ ಟೀಮ್ ಇಂಡಿಯಾ ಲಾಡ್ರ್ಸ್ ಟೆಸ್ಟ್ ಪಂದ್ಯವನ್ನು ಗೆಲ್ಲುವ ಸೂಚನೆ ಏನು ಇರಲಿಲ್ಲ.
ಯಾಕಂದ್ರೆ ಟೀಮ್ ಇಂಡಿಯಾದ ಎರಡನೇ ಇನಿಂಗ್ಸ್ ನಲ್ಲಿ ಅತಿರಥ ಮಹಾರಥ ಬ್ಯಾಟ್ಸ್ ಮೆನ್ ಗಳು ಅಲ್ಪ ಮೊತ್ತ ದಾಖಲಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಕೂಡ ಹೋರಾಟ ಮುಗಿಸಿದ್ದರು. ಇನ್ನೇನೂ ಪಂದ್ಯ ಡ್ರಾ ಮಾಡಿಕೊಳ್ಳಬೇಕು ಅನ್ನೋ ಮನಸ್ಥಿತಿ ಟೀಮ್ ಇಂಡಿಯಾದ್ದು ಆಗಿದ್ರೆ ಇಂಗ್ಲೆಂಡ್ ಗೆಲುವಿನ ಕನಸು ಕಾಣುತ್ತಿತ್ತು. \
ಆದ್ರೆ ಕ್ರಿಕೆಟ್ ಕಾಶಿಯಲ್ಲಿ ನಡೆದಿದ್ದೇ ಬೇರೆ. ಯಾರೂ ಕೂಡ ಊಹೆ ಮಾಡದ ರೀತಿಯಲ್ಲಿ ಜಸ್ಪ್ರಿತ್ ಬೂಮ್ರಾ ಮತ್ತು ಮಹಮ್ಮದ್ ಶಮಿ ಬ್ಯಾಟಿಂಗ್ ಮಾಡಿದ್ದರು. 9ನೇ ವಿಕೆಟ್ ಗೆ ಶಮಿ ಮತ್ತು ಬೂಮ್ರಾ ಅಜೇಯ 89 ರನ್ ಗಳ ಜೊತೆಯಾಟವನ್ನು ಆಡಿದ್ದರು. ಮಹಮ್ಮದ್ ಶಮಿ ಅಜೇಯ 56 ರನ್ ಗಳಿಸಿದ್ರೆ, ಬೂಮ್ರಾ ಅಜೇಯ 34 ರನ್ ಸಿಡಿಸಿದ್ರು. ಪರಿಣಾಮ ಇಂಗ್ಲೆಂಡ್ ಗೆ ಗೆಲ್ಲಲು ಬೇಕಾಗಿದ್ದು 272 ರನ್.
ಈ ಸವಾಲು ತುಸು ಕಷ್ಟವಾದ್ರೂ ತವರು ನೆಲದ ಲಾಭವನ್ನು ಪಡೆದುಕೊಂಡು ಆಂಗ್ಲರು ಗೆಲುವು ದಾಖಲಿಸುವ ಯೋಚನೆಯಲ್ಲಿದ್ರು. ಹಾಗಂತ ಇದು ಸುಲಭವೇನೂ ಆಗಿರಲಿಲ್ಲ. ಅಂತಿಮ ದಿನ ಬ್ಯಾಟಿಂಗ್ ಮಾಡೋದು ಕಷ್ಟ.. ಆದ್ರೂ ಟೀಮ್ ಇಂಡಿಯಾಗೆ ಚಮಕ್ ಕೊಡುವ ಇರಾದೆಯಲ್ಲಿದ್ದರು ಇಂಗ್ಲೀಷರು. ಈ ನಡುವೆ ಗೆಲ್ಲಲು ಸಾಧ್ಯವಾಗದೇ ಇದ್ರೂ ಕನಿಷ್ಠ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಯೋಜನೆ ಇಂಗ್ಲೆಂಡ್ ತಂಡದ್ದಾಗಿತ್ತು.
ಆದ್ರೆ ಇಂಗ್ಲೆಂಡ್ ಲೆಕ್ಕಚಾರಗಳನ್ನು ಬುಡಮೇಲು ಮಾಡಿದ್ದು ಟೀಮ್ ಇಂಡಿಯಾದ ನಾಲ್ವರು ವೇಗಿಗಳು. ಇಂಗ್ಲೆಂಡ್ ಗೆ ಆರಂಭದಲ್ಲೇ ಆಘಾತ ನೀಡಿದ್ದು ಜಸ್ಪ್ರಿತ್ ಬೂಮ್ರಾ ಮತ್ತು ಮಹಮ್ಮದ್ ಶಮಿ. ಖಾತೆ ತೆರೆಯುವ ಮುನ್ನವೇ ಇಂಗ್ಲೆಂಡ್ ನ ಆರಂಭಿಕರಾದ ರೋರಿ ಬನ್ರ್ಸ್ ಮತ್ತು ಡಾಮಿನಿಕ್ ಸಿಬ್ಲೆ ಕ್ರಮವಾಗಿ ಬೂಮ್ರಾ ಮತ್ತು ಶಮಿಗೆ ಬಲಿಯಾದ್ರು.
ನಂತರ ಹಸೀಬ್ ಹಮೀದ್ (9 ರನ್) ಮತ್ತು ಜಾನಿ ಬೇರ್ ಸ್ಟೋವ್ (2 ರನ್) ಇಶಾಂತ್ ಅವರ ಎಲ್ ಬಿ ಬಲೆಗೆ ಬಿದ್ರು. ಇನ್ನೊಂದೆಡೆ ಅಪಾಯಕಾರಿ ಇಂಗ್ಲೆಂಡ್ ನಾಯಕ ಜಾಯ್ ರೂಟ್ (33 ರನ್) ಅವರಿಗೆ ಬೂಮ್ರಾ ಪೆವಿಲಿಯನ್ ದಾರಿ ತೋರಿಸಿದ್ರು. ಅಲ್ಲಿಗೆ ಇಂಗ್ಲೆಂಡ್ ಸೋಲಿನ ದವಡೆಗೆ ಸಿಲುಕಿತ್ತು.
ಬಳಿಕ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳಿಗೆ ಕಂಟಕವಾಗಿ ಪರಿಣಮಿಸಿದ್ದು ಯುವ ವೇಗಿ ಮಹಮ್ಮದ್ ಸೀರಾಜ್. ಮೊದಲು ಮೋಯಿನ್ ಆಲಿ (13 ರನ್), ಸ್ಯಾಮ್ ಕುರನ್ (0) ಪೆವಿಲಿಯನ್ ಸೇರಿಕೊಳ್ಳುವಂತೆ ಮಾಡಿದ್ದರು ಸೀರಾಜ್. ಇನ್ನೊಂದೆಡೆ ಒಲಿಯ್ ರಾಬಿನ್ಸನ್ (9) ಅವರನ್ನು ಬೂಮ್ರಾ ಬಲಿ ಪಡೆದುಕೊಂಡ್ರು.
ಇನ್ನೊಂದೆಡೆ ಕ್ರೀಸ್ ಗೆ ಅಂಟಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದ ಜೋಸ್ ಬಟ್ಲರ್ (25 ರನ್) ಸೀರಾಜ್ ಗೆ ಮೂರನೇ ಬಲಿಯಾದ್ರು. ಅಂತಿಮವಾಗಿ ಅನುಭವಿ ಹಾಗೂ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಅವರಿಗೆ ಮಹಮ್ಮದ್ ಸೀರಾಜ್ ಖಾತೆ ತೆರೆಯಲು ಕೂಡ ಅವಕಾಶ ನೀಡಲಿಲ್ಲ. ಅಲ್ಲಿಗೆ ಇಂಗ್ಲೆಂಡ್ ತನ್ನ ಎರಡನೇ ಇನಿಂಗ್ಸ್ ನಲ್ಲಿ 120 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 151 ರನ್ ಗಳಿಂದ ಸೋಲು ಒಪ್ಪಿಕೊಂಡಿತ್ತು.
ಟೀಮ್ ಇಂಡಿಯಾ ಪರ ಮಹಮ್ಮದ್ ಸೀರಾಜ್ ನಾಲ್ಕು ವಿಕೆಟ್ ಪಡೆದ್ರೆ, ಬೂಮ್ರಾ ಮೂರು ವಿಕೆಟ್ ಉರುಳಿಸಿದ್ರು. ಶಮಿ ಒಂದು ವಿಕೆಟ್ ಪಡೆದ್ರು. ಇಶಾಂತ್ ಶರ್ಮಾ ಎರಡು ವಿಕೆಟ್ ಕಬಳಿಸಿದ್ರು.
ಇನ್ನು ಮಹಮ್ಮದ್ ಸೀರಾಜ್ ಮೊದಲ ಇನಿಂಗ್ಸ್ ನಲ್ಲೂ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳಿಗೆ ಕಂಟಕವಾಗಿ ಪರಿಣಮಿಸಿದ್ರು. ಮೊದಲ ಇನಿಂಗ್ಸ್ ನಲ್ಲೂ ಸಿರಾಜ್ ನಾಲ್ಕು ವಿಕೆಟ್ ಪಡೆದ್ರೆ, ಇಶಾಂತ್ ಮೂರು ವಿಕೆಟ್ ಉರುಳಿಸಿದ್ರು. ಶಮಿ ಎರಡು ವಿಕೆಟ್ ಗಿಟ್ಟಿಸಿಕೊಂಡಿದ್ದರು.
ಒಟ್ಟಿನಲ್ಲಿ ಮಹಮ್ಮದ್ ಸೀರಾಜ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು ಎಂಟು ವಿಕೆಟ್ ಪಡೆದುಕೊಂಡು ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.








