ನವದೆಹಲಿ: ವ್ಯಕ್ತಿಯೊಬ್ಬ ಕ್ಯಾನ್ಸರ್ ರೋಗದಿಂದಾಗಿ ಜಿಗುಪ್ಸೆಗೊಂಡು ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ರಾಷ್ಟ್ರ ರಾಜಧಾನಿಯ ಉದ್ಯೋಗ ಭವನ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ದೆಹಲಿ ವಿಶ್ವವಿದ್ಯಾಲಯದ ಮಾರ್ಗವಾಗಿ ತೆರಳುತ್ತಿದ್ದ ರೈಲಿಗೆ ಬಿದ್ದು 39 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕಾಲ ಕೆಲಹೊತ್ತು ಸಂಚಾರ ಅಸ್ತವ್ಯಸ್ಥವಾಗಿತ್ತು ಎನ್ನಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಇದರಿಂದಾಗಿ ಆತ ತೀವ್ರವಾಗಿ ಅಸಮಾಧಾನಗೊಂಡಿದ್ದ. ಹೀಗಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ದೆಹಲಿಯ ಮುಕುಂದಪುರದಲ್ಲಿ ವಾಸಿಸುತ್ತಿದ್ದ ಮೃತ ವ್ಯಕ್ತಿ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಕೂಡ ಒಳಗಾಗಿದ್ದ. ಆತನಿಗೆ ಸರಿಯಾಗಿ ಕೆಲಸ ಕೂಡ ಮಾಡಲು ಆಗುತ್ತಿರಲಿಲ್ಲ ಎಂದು ಅವರ ಪತ್ನಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ವ್ಯಕ್ತಿಯ ಜೇಬಿನಿಂದ ಸಿಕ್ಕ ಚೀಟಿಯಲ್ಲಿ ಮೊಬೈಲ್ ನಂಬರ್ ಪತ್ತೆಯಾಗಿದ್ದು, ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ.