ರಾಯಚೂರು: ಮದ್ಯ ವ್ಯಸನಿಯೊಬ್ಬಾತ ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಚಾಂದಪಾಷಾ ಎಂಬ ಮದ್ಯ ವ್ಯಸನಿ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ಘಟನೆ ನಗರದ ಗದ್ವಾಲ್ ರಸ್ತೆಯಲ್ಲಿ ನಡೆದಿದೆ. ಗದ್ವಾಲ್ ರಸ್ತೆಯ ಆಂಜನೇಯ ದೇವಸ್ಥಾನಕ್ಕೆ ಶಾಸಕ ಶಿವರಾಜ್ ಪಾಟೀಲ್ ತೆರಳಿದ್ದರು. ಈ ಸಂದರ್ಭದಲ್ಲಿ ಮದ್ಯ ವ್ಯಸನಿ ಚಾಂದಪಾಷಾ ಶಾಸಕರನ್ನು ನೋಡಿ ಅವರ ಹತ್ತಿರ ಓಡಿ ಬಂದಿದ್ದಾನೆ.
ಆಗ ನಮ್ಮ ಮನೆಗೆ ನಲ್ಲಿ ಹಾಕಿಸಿಲ್ಲ ಅಂತ ಹೇಳಿದ್ದಾನೆ. ಚಾಂದ್ಪಾಷಾ 3-4 ಕತ್ತಿಗಳನ್ನು ಹಿಡಿದಿದ್ದು, ಶಾಸಕರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಕೂಡಲೆ ಅಂಗರಕ್ಷಕರು ಆತನನ್ನು ತಡೆದಿದ್ದಾರೆ. ಆನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆಯಲ್ಲಿ ಹಲ್ಲೆ ಮಾಡಲು ಹೋಗಿರಲಿಲ್ಲ, ಅವರೊಂದಿಗೆ ಮಾತನಾಡಲು ಹೋಗಿದ್ದೆ ಎಂದು ಚಾಂದ್ಪಾಷಾ ಹೇಳಿದ್ದಾನೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.