ಟೊಮೆಟೊ ಬೆಲೆ ಗಗನಕ್ಕೇರಿದ್ದು, ರಾಜ್ಯಗಳಲ್ಲಿ ಸಿಗುವ ಫಸಲು ಆಧರಿಸಿ ಕೆಜಿಗೆ 100ರಿಂದ 200 ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಟೊಮೇಟೊ ಖರೀದಿಗೆ ಗ್ರಾಹಕರು ಮುಗಿಬೀಳುತ್ತಿದ್ದರೆ, ಅಪರೂಪಕ್ಕೆ ಕೆಲವೊಂದಿಷ್ಟು ರೈತರು ಟೊಮೆಟೊ ಬೆಳೆದು ಲಾಭ ಪಡೆಯುತ್ತಿದ್ದಾರೆ. ಈ ತಿಂಗಳಿನಲ್ಲಿ ಟೊಮೆಟೊ ಕಟಾವು ಮಾಡಿರುವ ರೈತರಿಗೆ ಭರ್ಜರಿ ಲಾಭವಾಗುತ್ತಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತರೊಬ್ಬರು ಟೊಮೆಟೊ ಕೃಷಿಯಿಂದ ಕೋಟಿಗಟ್ಟಲೆ ಆದಾಯ ಗಳಿಸಿದ್ದಾರೆ. ಸೋಮಲ ಮಂಡಲದ ಕಲಕಮಂಡ ಗ್ರಾಮದ ರೈತ ಚಂದ್ರಮೌಳಿ ಕುಟುಂಬ ಜಂಟಿ ಕೃಷಿಯನ್ನು 32 ಎಕರೆ ಪ್ರದೇಶದಲ್ಲಿ ಮಾಡುತ್ತಿದ್ದರು.
ಚಂದ್ರಮೌಳಿ ಅವರ ಕುಟುಂಬ ಹಲವು ವರ್ಷಗಳಿಂದ ಟೊಮೆಟೊ ಕೃಷಿ ಮಾಡುತ್ತಿದೆ. ಕೃಷಿ ಪದ್ಧತಿಯನ್ನು ಸದಾ ಹೊಸ ಪದ್ದತಿಯನ್ನು ಅಳವಡಿಸುವ ಚಂದ್ರಮೌಳಿ, ಪ್ರತಿ ವರ್ಷದಂತೆ ಜುಲೈನಲ್ಲಿ ಇಳುವರಿ ಬರಬಹುದು ಎಂದು ಭಾವಿಸಿ ಏಪ್ರಿಲ್ನಲ್ಲಿ ಟೊಮೆಟೊ ಬೆಳೆ ಹಾಕಿದ್ದರು.
32 ಎಕರೆ ಜಮೀನಿನಲ್ಲಿ ಎರಡು ಕಡೆ ಒಟ್ಟು 22 ಎಕರೆಯಲ್ಲಿ, ಟೊಮೆಟೊ ಗಿಡಗಳನ್ನು ನೆಟ್ಟು, ಮಲ್ಚಿಂಗ್ ಮತ್ತು ಹನಿ ನೀರಾವರಿ ಮೂಲಕ ವ್ಯವಸಾಯ ಮಾಡಿದ್ದಾರೆ. ಜೂನ್ ಕೊನೆಯ ವಾರದಲ್ಲಿ ಇಳುವರಿ ಆರಂಭವಾಗಿದೆ. ಕೊಯ್ಲು ಬಂದ ತಕ್ಷಣ ಕರ್ನಾಟಕದ ಕೋಲಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್ ಗೆ 1500 ರೂಪಾಯಿ ಇದೆ. ಈ ಸೀಸನ್ ನಲ್ಲಿ ಇದುವರೆಗೆ ಚಂದ್ರಮೌಳಿ ಕುಟುಂಬ 40 ಸಾವಿರ ಬಾಕ್ಸ್ ಗಳು ಮಾರಾಟ ಮಾಡಿದೆ. ಇದರಿಂದ ಒಟ್ಟು 4 ಕೋಟಿ ರೂ. ಲಾಭ ಮಾಡಿಕೊಂಡಿದ್ದಾರೆ. 22 ಎಕರೆಯಲ್ಲಿ ಟೊಮೆಟೊ ಬೆಳೆಯಲು 70 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಕಮಿಷನ್ 20 ಲಕ್ಷ, ಸಾಗಾಣಿಕೆ 10 ಲಕ್ಷ ಕಳೆದು 3 ಕೋಟಿ ರೂಪಾಯಿ ನಿವ್ವಳ ಆದಾಯ ಪಡೆದಿದ್ದಾರೆ.