ಬ್ರೂನೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬ್ರೂನೈ (Brunei) ಪ್ರವಾಸಕ್ಕೆ ತೆರಳಿದ್ದಾರೆ. ಈ ಮೂಲಕ ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಪ್ರವಾಸ ಇದು ಎನ್ನಲಾಗಿದೆ. ಈ ವೇಳೆ ಬ್ರೂನೈ ಸುಲ್ತಾನರಿಂದ ಭವ್ಯ ಸ್ವಾಗತ ಸಿಕ್ಕಿದೆ.
ಬ್ರೂನೈನಲ್ಲಿ ಪ್ರಧಾನಿ ಮೋದಿ 2 ದಿನದ ಪ್ರವಾಸದಲ್ಲಿದ್ದಾರೆ. ಅಲ್ಲದೇ, ಬ್ರೂನೈ ಸುಲ್ತಾನರ ಐಷಾರಾಮಿ ಮನೆಯಲ್ಲಿ ಪ್ರಧಾನಿ ಊಟ ಸವಿಯಲಿದ್ದಾರೆ. 2ನೇ ದಿನ ಪ್ರಧಾನಿ ಮೋದಿ ಅವರು ಬ್ರೂನೈ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರನ್ನು ಅವರ ಅಧಿಕೃತ ನಿವಾಸ, ವಿಶ್ವದ ಅತಿದೊಡ್ಡ ಇಸ್ತಾನಾ ನೂರುಲ್ ಇಮಾನ್ ಅರಮನೆಯಲ್ಲಿ ಭೇಟಿಯಾಗಲಿದ್ದಾರೆ. ಈ ಮನೆ ವಿಶ್ವದಾಖಲೆ ಹೊಂದಿದ ಮನೆಯಾಗಿದೆ.
ಈ ಮನೆಯಲ್ಲಿ 1,788 ಕೊಠಡಿಗಳು, 257 ಸ್ನಾನಗೃಹಗಳು ಮತ್ತು 38 ರೀತಿಯ ಅಮೃತಶಿಲೆಯಿಂದ ಮಾಡಿದ 44 ಮೆಟ್ಟಿಲುಗಳಿವೆ. ಈ ಐಷಾರಾಮಿ ಮನೆಯಲ್ಲಿಯೇ ಪ್ರಧಾನಿ ಮೋದಿಗೆ ವಿಶೇಷ ಆತಿಥ್ಯ ಸಿಗಲಿದೆ.
ದಿವಂಗತ ರಾಣಿ ಎಲಿಜಬೆತ್ II ಅವರನ್ನು ಬಿಟ್ಟರೆ, ವಿಶ್ವದಲ್ಲೇ ಅತ್ಯಂತ ದೀರ್ಘಾವಧಿಯ ದೊರೆಯಾಗಿರುವ ಎರಡನೇ ಸುಲ್ತಾನ ಇವರಾಗಿದ್ದು, ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲು ಕೂಡ ಒಬ್ಬರಾಗಿದ್ದಾರೆ.
ಪ್ರಧಾನಿ ಮೋದಿ ಮತ್ತು ಬ್ರೂನೈ ಸುಲ್ತಾನ್ ಅವರು 2014 ನವೆಂಬರ್ನಲ್ಲಿ ನೇ ಪೈ ತಾವ್ನಲ್ಲಿ ನಡೆದಿದ್ದ 25 ನೇ ಆಸಿಯಾನ್ ಶೃಂಗಸಭೆ ಮತ್ತು ಮನಿಲಾದಲ್ಲಿ ನಡೆದ 2017 ರ ಪೂರ್ವ ಏಷ್ಯಾ ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾಗಿದ್ದರು.
ಭೇಟಿಯ ಸಂದರ್ಭದಲ್ಲಿ ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ, ಇಂಧನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಆರೋಗ್ಯದಂತಹ ಸಹಕಾರದ ಕ್ಷೇತ್ರಗಳ ಮೇಲೆ ದ್ವಿಪಕ್ಷೀಯ ಚರ್ಚೆಗಳಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಅಲ್ಲದೇ, ಹಲವಾರು ಒಪ್ಪಂದಗಳಿಗೆ ಸಹಿ ಹಾಕಬಹುದು ಎನ್ನಲಾಗುತ್ತಿದೆ.