ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ರಂಗೇರಿದೆ. ಈ ವೇಳೆ ಲೋಕನೀತಿ- ಸಿಎಸ್ ಡಿಎಸ್ ಸಮೀಕ್ಷೆ ಹೊರ ಬಿದ್ದಿದ್ದು, ಬಿಜೆಪಿಯು ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟಕ್ಕಿಂತ ಶೇ 12ರಷ್ಟು ಹೆಚ್ಚು ಮತ ಪಡೆಯಲಿದೆ ಎಂದು ಹೇಳಿದೆ.
ಅಲ್ಲದೇ, ಸದ್ಯದ ಸಮೀಕ್ಷೆಯಂತೆ ಬಿಜೆಪಿ ಪಕ್ಷವು ದಕ್ಷಿಣ -ಪೂರ್ವ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕೂಡ ಹೆಚ್ಚಿನ ಸ್ಥಾನ ಗೆಲ್ಲಲಿದೆ.
ಲೋಕ ನೀತಿ ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಅಥವಾ ಸಿಎಸ್ಡಿಎಸ್ ರಾಜಕೀಯ ಮತ್ತು ಸಮಾಜದ ಕುರಿತು ಸಂಶೋಧನೆ ಕೈಗೊಂಡಿದೆ. ಬಿಜೆಪಿಯು ‘ಇಂಡಿಯಾ’ ಮೈತ್ರಿಕೂಟಕ್ಕಿಂತ ಶೇ. 1 ರಷ್ಟು ಮತ ಪ್ರಮಾಣದ ಮುನ್ನಡೆ ಸಾಧಿಸಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಶೇ 46 ಮತ ಹಂಚಿಕೆ ಪಡೆದರೆ, ಇಂಡಿಯಾ ಶೇ 34ರ ಮತ ಹಂಚಿಕೆ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಗೆ ಒಳಗಾದ 10 ಜನ ಮತದಾರರ ಪೈಕಿ ನಾಲ್ವರು ಬಿಜೆಪಿ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಕೂಡ ಕೆಲವೆಡೆ ಲಾಭ ಗಳಿಸಲಿದೆ. ಮತ ಹಂಚಿಕೆ ಪ್ರಮಾಣ ಅಷ್ಟೊಂದು ಹೆಚ್ಚಳವಾಗಿಲ್ಲ ಎಂದು ಸಮೀಕ್ಷೆ ಹೇಳಿದೆ. ಭಾರತದಲ್ಲಿ 2019ರಲ್ಲಿ ಶೇ 18ರಷ್ಟಿದ್ದ ಬಿಜೆಪಿ ಮತ ಹಂಚಿಕೆ ಪ್ರಮಾಣ ಈ ಚುನಾವಣೆಯಲ್ಲಿ ಶೇ. 25ಕ್ಕೆ ಹೆಚ್ಚಳವಾಗಲಿದೆ. ಪೂರ್ವ ಭಾರತ ಮತ್ತು ಈಶಾನ್ಯದಲ್ಲಿ 2019ರಲ್ಲಿ ಶೇ 34ರಷ್ಟಿದ್ದ ಮತ ಹಂಚಿಕೆ ಈ ಬಾರಿ ಶೇ 42ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಿದೆ.